ಬೆಂಗಳೂರು : ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಆನ್ ಲೈನ್ ಸೀಟು ಹಂಚಿಕೆಗೆ ಚಾಲನೆ ನೀಡಿದ್ದು ನ.18ರಿಂದ 20ರವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಇದು ಸೇವಾ ನಿರತರಲ್ಲದ ಅರ್ಹರಿಗೆ ಅನ್ವಯವಾಗಲಿದೆ. ನ.21ರಂದು ಸಂಜೆ 4ಗಂಟೆಗೆ ಅಣಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ನ.24ರಂದು ಬೆಳಿಗ್ಗೆ 10ಗಂಟೆವರೆಗೆ ಇಚ್ಛೆ/ಆಯ್ಕೆಗಳನ್ನು ಅದಲು-ಬದಲು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ನ.25ರಂದು ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಹಾಗೂ ನ.26ರಂದು ಬೆಳಿಗ್ಗೆ 11 ಗಂಟೆ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶುಲ್ಕ ಪಾವತಿ, ಕಾಲೇಜಿಗೆ ವರದಿ ಮಾಡಿಕೊಳ್ಳುವ ವೇಳಾಪಟ್ಟಿಯನ್ನು ನಂತರದ ದಿನಗಳಲ್ಲಿ ಪ್ರಕಟಿಸಲಾಗುತ್ತದೆ. ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಲು ನ.17ರವರೆಗೆ ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಮೊದಲ ಸುತ್ತಿನಲ್ಲಿ ದಾಖಲಿಸುವ ಇಚ್ಛೆ/ಆಯ್ಕೆಗಳು ಎರಡನೇ ಸುತ್ತಿನವರೆಗೂ ಅವೇ ಇರುತ್ತವೆ. ಹೀಗಾಗಿ ಎಚ್ಚರವಹಿಸಿ, ದಾಖಲಿಸಲು ಅವರು ಮನವಿ ಮಾಡಿದ್ದಾರೆ. ಹೆಚ್ಚಿನ ವಿವರಗಳಿಗೆ ಪಿಜಿನೀಟ್ ಮಾಹಿತಿ ಪುಸಕ್ತ ನೋಡಲು ಅವರು ಕೋರಿದ್ದಾರೆ.

