ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?

Public TV
3 Min Read
PETROL BANG

ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರ ಭಾರೀ ಏರಿಕೆಯಾಗುತ್ತಿದ್ದು, ನೂರರ ಗಡಿಯತ್ತ ಮುನ್ನುಗ್ಗುತ್ತಿದೆ. ಹೀಗಾಗಿ ಜನ ಕೇಂದ್ರ ಸರ್ಕಾರ ಅಬಕಾರಿ ಸುಂಕ ಮತ್ತು ರಾಜ್ಯ ಸರ್ಕಾರ ವ್ಯಾಟ್ ಕಡಿತಗೊಳಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಚೀನಾ ಅಮೆರಿಕದ ನಡುವಿನ ವಾಣಿಜ್ಯ ಸಮರದಿಂದಾಗಿ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಪರಿಣಾಮ ಕೆಲ ದಿನಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಪ್ರತಿ ದಿನ ಏರಿಕೆಯಾಗುತ್ತಿದೆ. ಇದರ ಜೊತೆ ಈ ವರ್ಷದ ಬಜೆಟ್ ನಲ್ಲಿ ರಾಜ್ಯಸರ್ಕಾರ ಇಂಧನಗಳ ಮೇಲೆ ಸೆಸ್ ಹೊರೆಯಿಂದ ತೈಲ ದರ ದಿನೇ ದಿನೇ ಏರಿಕೆಯಾಗುತ್ತಿದೆ.

ಕಳೆದ ಆಗಸ್ಟ್ 1 ರಂದು ಪೆಟ್ರೋಲ್ ಪ್ರತಿ ಲೀಟರಿಗೆ 78.77 ರೂ. ಹಾಗೂ ಡೀಸೆಲ್ 69.97 ರೂ. ಆಗಿತ್ತು. ಮಂಗಳವಾರದ ದರ ಪೆಟ್ರೋಲ್ ಗೆ ಪ್ರ.ಲೀ. 81.92 ಆಗಿದ್ದರೆ, ಡೀಸೆಲ್ 73.64 ರೂಪಾಯಿ ಆಗಿದೆ.

petrol pump 3

1 ಲೀಟರ್ ನಲ್ಲಿ ಯಾರ ಪಾಲು ಎಷ್ಟು?
ಕರ್ನಾಟಕಕ್ಕೆ ಪೂರೈಕೆಯಾಗುವ ಪೆಟ್ರೋಲಿನ ಮೂಲ ಬೆಲೆ ಪ್ರತಿ ಲೀಟರಿಗೆ 58.66 ರೂ. ಆಗಿದ್ದು ಇದಕ್ಕೆ ರಾಜ್ಯ ತೆರಿಗೆ 37% (18.99 ರೂ.) ಇದರ ಜೊತೆಗೆ ಬಂಕ್‍ಗಳ ಮಾಲೀಕರ ಕಮೀಷನ್ 3.70 ರೂಪಾಯಿ, ಸಾಗಾಣಿಕಾ ವೆಚ್ಚ 0.57 ಪೈಸೆ ಸೇರಿ ಪ್ರತಿ ಲೀಟರಿಗೆ ಒಟ್ಟು 81.92 ಪೈಸೆ ಆಗುತ್ತದೆ.

ಡೀಸೆಲ್‍ನ ಮೂಲ ಬೆಲೆ ಪ್ರತಿ ಲೀಟರಿಗೆ 58.17 ರೂ. ಆಗಿದ್ದು, ಇದಕ್ಕೆ ರಾಜ್ಯ ತೆರಿಗೆ 21% (12.36 ರೂ.) ಬಂಕ್‍ಗಳ ಮಾಲೀಕರ ಮಾಲೀಕರ ಕಮೀಷನ್ 2.60 ರೂ. ಹಾಗೂ ಸಾಗಾಣಿಕಾ ವೆಚ್ಚ 0.51 ಪೈಸೆ ಸೇರಿ ಪ್ರತಿ ಲೀಟರಿಗೆ 73.64 ರೂಪಾಯಿ ಆಗುತ್ತದೆ.

ರೈತರ ಸಾಲಮನ್ನಾ ಮಾಡಲು ಕುಮಾರಸ್ವಾಮಿ ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು 30% ರಿಂದ 32% ಗೆ ಏರಿಕೆ ಮಾಡಿದೆ. ಹಾಗೆಯೇ ಡೀಸೆಲ್ ಮೇಲಿನ ತೆರಿಗೆಯನ್ನು 19% ನಿಂದ 21% ಗೆ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳದಿಂದ ಲೀಟರ್ ಪೆಟ್ರೋಲ್ ಬೆಲೆ 1.14 ರೂ. ಮತ್ತು ಡೀಸೆಲ್ ಬೆಲೆ 1.12 ರೂ.ನಷ್ಟು ಹೆಚ್ಚಾಗಲಿದೆ.

petrol pump 2

ಅಬಕಾರಿ ಸುಂಕ ಏರಿಕೆ:
ತೈಲ ಬೆಲೆ ಏರಿಕೆಯಾಗಲು ಕೇಂದ್ರ ಸರ್ಕಾರ ಅಬಕಾರಿ ಸುಂಕವೂ ಕಾರಣವಾಗಿದೆ. 2014 ರಿಂದ 2016 ರ ಅವಧಿಯಲ್ಲಿ ಕೇಂದ್ರ ಸರ್ಕಾರ 9 ಬಾರಿ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಈ ಅವಧಿಯಲ್ಲಿ ಪೆಟ್ರೋಲ್ ಮೇಲೆ 11.77 ರೂ., ಡೀಸೆಲ್ ಮೇಲೆ 13.47 ರೂ. ನಂತೆ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಇದರಿಂದಾಗಿ 2014-15 ರಲ್ಲಿ ಬೊಕ್ಕಸಕ್ಕೆ 99 ಕೋಟಿ ರೂ. ಬಂದಿದ್ದರೆ, 2016-17 ನೇ ಅವಧಿಯಲ್ಲಿ 2.42 ಲಕ್ಷ ಕೋಟಿ ರೂ. ಆದಾಯ ಬಂದಿತ್ತು.

ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ತೈಲ ಬೆಲೆ ವಿಧಿಸುತ್ತಿದ್ದು, ಪ್ರತಿ ಲೀಟರ್ ಪೆಟ್ರೋಲ್ ಮೇಲೆ 9.48 ರೂ. ನಿಂದ 21.48 ರೂ., ಡೀಸೆಲ್ ಮೇಲೆ 3.56 ರೂ.ನಿಂದ 17.33 ರೂ. ಏರಿಕೆ ಮಾಡಿದೆ. 2016 ರ ವರೆಗೆ ಈ ಏರಿಕೆ ಮಾಡಿದ್ದು, 2017 ರ ಅಕ್ಟೋಬರ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಅಬಕಾರಿ ಸುಂಕದಿಂದ ಸಂಗ್ರಹವಾದ ಹಣವನ್ನು ಜನರ ಕಲ್ಯಾಣ ಯೋಜನೆಗೆ ಬಳಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿತ್ತು.

PETROL HIKE

ಕೇಂದ್ರ ಸರ್ಕಾರ ಹೇಳೋದು ಏನು?
2012-2014 ರ ತನಕ ಯುಪಿಎ ಸರ್ಕಾರದ ಅವಧಿಯಲ್ಲಿ ಜಾಗತಿಕವಾಗಿ ತೈಲ ದರ ಹೆಚ್ಚಿದ್ದರೂ, ದೇಶೀಯವಾಗಿ ತೈಲ ದರಗಳು ಏರಿಕೆಯಾಗಿರಲಿಲ್ಲ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ಭಾರತದಲ್ಲಿ ಕಡಿಮೆಯಾಗಿಲ್ಲ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಆದರೆ ಆಗ ಯುಪಿಎ ಸರ್ಕಾರ 1.44 ಲಕ್ಷ ಕೋಟಿ ರೂ. ಮೌಲ್ಯದ ತೈಲ ಬಾಂಡ್ ಖರೀದಿಸಿತ್ತು. ಇದಕ್ಕೆ ಕೇವಲ ಬಡ್ಡಿಯಾಗಿ 70 ಸಾವಿರ ಕೋಟಿ ರೂ.ಗಳನ್ನು ಎನ್‍ಡಿಎ ಸರಕಾರ ಪಾವತಿಸಿದೆ. ಒಟ್ಟು 2 ಲಕ್ಷ ಕೋಟಿ ರೂ.ಗಳನ್ನು ಮೋದಿ ಸರಕಾರ ಮರು ಪಾವತಿಸಿದೆ. ಯುಪಿಎ ಸರ್ಕಾರ ಹಗರಣಗಳ ಪರಿಣಾಮ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಇರಲಿಲ್ಲ. ಹೀಗಾಗಿ ತೈಲ ಬಾಂಡ್‍ಗಳ ಮೂಲಕ ಭಾರೀ ಸಾಲವನ್ನು ತೆಗೆದುಕೊಂಡಿತ್ತು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ಹಿಂದೆ ಪ್ರತಿಕ್ರಿಯಿಸಿದ್ದರು.

petrol diesel

ಅಬಕಾರಿ ಸುಂಕ ಇಳಿಕೆಯಾಗುತ್ತಾ?
ಕಚ್ಚಾ ತೈಲದ ಮೇಲಿನ ಪ್ರತಿ ರೂಪಾಯಿ ಕಡಿತದಿಂದ ಸರ್ಕಾರಕ್ಕೆ 13 ಸಾವಿರ ಕೋಟಿ ರೂ. ನಷ್ಟವಾಗುತ್ತದೆ. ಒಂದು ವೇಳೆ ಕಡಿತಗೊಳಿಸಿದರೆ ಮುಂದೆ ಆರ್ಥಿಕ ಕೊರತೆಯಾಗಲಿದೆ. ಹೀಗಾಗಿ ಗ್ರಾಹಕರ ಮೇಲಿನ ಹೊರೆಯನ್ನು ತಗ್ಗಿಸಲು ರಾಜ್ಯ ಸರ್ಕಾರಗಳು ತೈಲ ಇಂಧನದ ಮೇಲಿನ ವ್ಯಾಟ್ ಕಡಿತಗೊಳಿಸಲೇಬೇಕು ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=NzLKz3S5_rY

Share This Article
Leave a Comment

Leave a Reply

Your email address will not be published. Required fields are marked *