LatestMost SharedNational

ಗುಡ್ ನ್ಯೂಸ್: ಭಾರೀ ಇಳಿಕೆ ಆಯ್ತು ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ: ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಬಹಳ ದಿನಗಳ ಬಳಿಕ ಮೊದಲ ಬಾರಿಗೆ ಭಾರೀ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.77 ರೂ. ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 2.91 ರೂ. ಇಳಿಕೆಯಾಗಿದೆ. ಪರಿಷ್ಕೃತ ದರ ಏಪ್ರಿಲ್ 1ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 56 ಡಾಲರ್‍ನಿಂದ (3,700 ರೂ.) 54 ಡಾಲರ್‍ಗೆ (3,570 ರೂ.) ಇಳಿಕೆಯಾದ ಹಿನ್ನೆಲೆಯಲ್ಲಿ ಭಾರತದಲ್ಲೂ ತೈಲಗಳ ದರ ಇಳಿಕೆಯಾಗಿದೆ.

ಮಾರ್ಚ್ 15ರಂದು ಭಾರತೀಯ ತೈಲ ಕಂಪೆನಿಗಳು ದರ ಪರಿಷ್ಕರಣೆ ಮಾಡಲಿದ್ದು, ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಅಂದಾಜು 2 ರೂ.ನಿಂದ 2.50 ರೂ.ರವರೆಗೆ ಇಳಿಕೆ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ ಅಂದು ಯಾವುದೇ ದರ ಪರಿಷ್ಕರಣೆ ಆಗಿರಲಿಲ್ಲ.

ಪ್ರತಿ 15 ದಿನಗಳಿಗೊಮ್ಮೆ ಭಾರತೀಯ ತೈಲ ಕಂಪೆನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರವನ್ನು ನೋಡಿಕೊಂಡು ಬೆಲೆಯನ್ನು ಪರಿಷ್ಕರಿಸುತ್ತಿರುತ್ತವೆ. ಆದರೆ ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ತೈಲ ಕಂಪೆನಿಗಳು ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆಗೆ ಮುಂದಾಗಿರಲಿಲ್ಲ. ಆದರೆ, ಈ ಅವಧಿಯಲ್ಲಿ ಅಡುಗೆ ಅನಿಲ ದರವನ್ನು ಪರಿಷ್ಕರಿಸಲಾಗಿತ್ತು.

ಜನವರಿ 15ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 42 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 1.03 ಪೈಸೆ ಏರಿಕೆಯಾಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 76.28 ರೂ. ಇದ್ದರೆ, ಡೀಸೆಲ್ ಬೆಲೆ 63.16 ರೂ. ಇತ್ತು. ಇಳಿಕೆಯಾದ ನಂತರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 72.51 ರೂ.ಆಗಿದ್ದರೆ, ಡೀಸೆಲ್ ಬೆಲೆ 60.25 ರೂ. ಆಗಿದೆ.

Leave a Reply

Your email address will not be published. Required fields are marked *

Back to top button