ಅಮರಾವತಿ: ಟ್ಯೂಷನ್ ಮುಗಿಸಿ ವಾಪಸಾಗುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿಯೊಬ್ಬನ (Student) ಮೇಲೆ ದುಷ್ಕರ್ಮಿಗಳು ಪೆಟ್ರೋಲ್ (Petrol) ಸುರಿದು ಬೆಂಕಿ (Fire) ಹಚ್ಚಿರುವ ಅಮಾನುಷ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.
ಆಂಧ್ರಪ್ರದೇಶದ ಬಾಪಟ್ಲಾ (Bapatla) ಜಿಲ್ಲೆಯಲ್ಲಿ ಬಾಲಕ (Boy) ಅಮರ್‌ನಾಥ್‌ನನ್ನು (15) ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ. ಬಾಲಕನಿಗೆ ವೆಂಕಟೇಶ್ವರ್ (21) ಹಾಗೂ ಇತರ ಮೂವರು ವ್ಯಕ್ತಿಗಳು ಬೆಂಕಿ ಹಚ್ಚಿ ಹತ್ಯೆ ಮಾಡಿರುವುದಾಗಿ ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ.
ವೆಂಕಟೇಶ್ವರ್ ಮೃತ ಬಾಲಕನ ಸಹೋದರಿಗೆ ಈ ಮೊದಲು ಕಿರುಕುಳ ನೀಡುತ್ತಿದ್ದ. ಇದಕ್ಕೆ ಸಂಬಂಧಿಸಿದಂತೆ ವೆಂಕಟೇಶ್ವರ್ ಇತರ ಮೂವರೊಂದಿಗೆ ಸೇರಿಕೊಂಡು ಬಾಲಕನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ತೀವ್ರ ಸುಟ್ಟ ಗಾಯಗಳಿಂದಾಗಿ ಬಾಲಕನನ್ನು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಬಾಲಕ ತನಗೆ ವೆಂಕಟೇಶ್ವರ್ ಹಾಗೂ ಇತರ ಮೂವರು ಬೆಂಕಿ ಹಚ್ಚಿದ್ದಾಗಿ ತಿಳಿಸಿದ್ದಾನೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಗಾಳಿಗೆ ಉರುಳಿ ಬಿದ್ದ ಶಾಮಿಯಾನದ ಕಂಬಗಳು- ಮಹಿಳೆ ಸಾವು
ಘಟನೆಗೆ ಸಂಬಂಧಿಸಿದಂತೆ ಬಪಟ್ಲಾ ಪೊಲೀಸ್ ಠಾಣೆಯಲ್ಲಿ ದುಷ್ಕರ್ಮಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ವೆಂಕಟೇಶ್ವರ್‌ನಿಂದ ಕಿರುಕುಳಕ್ಕೆ ಒಳಗಾಗಿದ್ದ ಮೃತ ಬಾಲಕನ ಸಹೋದರಿಯೂ ಅಪ್ರಾಪ್ತಳಾಗಿರುವುದರಿಂದ ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಮತ್ತೊಂದು ಪ್ರಕರಣವನ್ನು ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಾರಣಾಂತಿಕ ಹಲ್ಲೆಗೈದು ಲಾರಿಯಲ್ಲಿದ್ದ 13 ಟನ್ ಸ್ಟೀಲ್ ದೋಚಿ ಚಾಲಕನನ್ನು ರಸ್ತೆಗೆಸೆದ್ರು!