ಬೆಂಗಳೂರು: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮುಗಿದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ.
ಮಾರ್ಚ್ 11 ರಿಂದ ಈವರೆಗೆ ಕೇವಲ ಶೇ.1 ರಷ್ಟು ಮಾತ್ರ ಪೆಟ್ರೋಲ್ ದರ ಏರಿಕೆಯಾಗಿದೆ. ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದ ಮಾರ್ಚ್ 10ಕ್ಕೂ ಹಿಂದಿನ ಎರಡು ತಿಂಗಳ ಅವಧಿಯಲ್ಲಿ ಪೆಟ್ರೋಲ್ ದರವು ಶೇ. 3.5 ರಷ್ಟು ಏರಿಕೆಯಾಗಿತ್ತು.
ಕಚ್ಚಾ ತೈಲದ ದರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿದ್ದರೂ ಅದರ ಹೊರೆಯನ್ನು ತೈಲ ಕಂಪನಿಗಳೇ ಭರಿಸುತ್ತಿವೆ. ಆದರೆ ಮೇ19 ರ ಬಳಿಕ ತೈಲ ಕಂಪನಿಗಳು ತಮ್ಮ ನಷ್ಟದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಿವೆ ಎಂದು ತಿಳಿದು ಬಂದಿದೆ.
ಒಂದು ತಿಂಗಳ ಅವಧಿಯಲ್ಲಿ ಕಚ್ಚಾ ತೈಲದ ದರ ಶೇ.10 ರಷ್ಟು ಏರಿಕೆಯಾಗಿದ್ದು, ಅದರನ್ವಯ ಪೆಟ್ರೋಲ್, ಡೀಸೆಲ್ ದರಗಳು 6-7 ರೂಪಾಯಿ ಏರಿಸಬೇಕಾಗುತ್ತದೆ. ಸರ್ಕಾರ ಅಬಕಾರಿ ಸುಂಕವನ್ನು ಇಳಿಸಿದರೆ ಬೆಲೆ ಏರಿಕೆ ಪ್ರಮಾಣ ಸ್ವಲ್ಪ ತಗ್ಗಬಹುದು. ಹೀಗಾಗಿ ಮೇ 19 ರ ಬಳಿಕ ನಿರಂತರ ತೈಲದರದಲ್ಲಿ ಏರುವುದು ಖಚಿತವಾಗಿದೆ.
ಜನವರಿಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲಕ್ಕೆ 52.40 ಡಾಲರ್ ಇದ್ದರೆ ಈಗ 70 ಡಾಲರ್‍ಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದು 80 ಡಾಲರ್‌ಗೆ ಏರಿಕೆಯಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಭಾರತಕ್ಕೆ ಇರಾನ್‍ನಿಂದ ತೈಲ ಆಮದನ್ನು ಅಮೆರಿಕ ಮೇ 2ರಿಂದಲೇ ನಿರ್ಬಂಧಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಇರಾನ್‍ನಿಂದ ಸರಬರಾಜಾಗುತ್ತಿದ್ದ ತೈಲವು ಇಳಿಕೆಯಾದರೆ, ಕಚ್ಚಾ ತೈಲದ ದರ ಏರುವುದು ಸಹಜ. ಭಾರತ ಇರಾನ್ ದೇಶದಿಂದ ಅಗ್ಗದ ದರದಲ್ಲಿ ತೈಲವನ್ನು ಪಡೆಯತಿತ್ತು. ಈಗ ಅಮೆರಿಕದ ನಿರ್ಧಾರದಿಂದ ಭಾರತ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ.