ನವದೆಹಲಿ: ಹೊಸ ವರ್ಷಕ್ಕೆ ಸವಾರರಿಗೆ ಗುಡ್ ನ್ಯೂಸ್ ಎನ್ನುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತಷ್ಟು ಇಳಿಕೆಯಾಗಿದೆ.
2018ರಲ್ಲಿ ಅತಿ ಕಡಿಮೆ ದರ ಇದಾಗಿದ್ದು, ಸೋಮವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 22 ಪೈಸೆ ಇಳಿಕೆಯಾಗಿದ್ದು, 69.60 ರೂ. ಇದೆ. ಭಾನುವಾರ ಪೆಟ್ರೋಲ್ ದರ 69.82 ರೂ. ಇತ್ತು. ಸೋಮವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ದರ 24 ಪೈಸೆ ಇಳಿಕೆಯಾಗಿದ್ದು, 63.43 ರೂ. ಇದೆ. ಭಾನುವಾರ ಡೀಸೆಲ್ ದರ 63.67 ರೂ. ಇತ್ತು.
Advertisement
Advertisement
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 69.04 ರೂ. ಮತ್ತು ಡೀಸೆಲ್ ದರ 63.09 ರೂ. ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ 74.67 ರೂ. ಮತ್ತು ಡೀಸೆಲ್ ದರ 66.01 ರೂ. ಇದೆ. ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಪೆಟ್ರೋಲ್ ದರ 71.15 ರೂ. ಮತ್ತು ಡೀಸೆಲ್ ದರ 64.84 ರೂ. ಇದ್ದರೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್ ದರ 71.62 ರೂ. ಮತ್ತು ಡೀಸೆಲ್ ದರ 66.59 ರೂ. ಇದೆ.
Advertisement
ಅಕ್ಟೋಬರ್ 3ನೇ ವಾರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 76 ಡಾಲರ್(5,335 ರೂ.) ತಲುಪಿದ್ದರೆ, ಈಗ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 3181 ರೂ.ಗೆ ಇಳಿಕೆಯಾಗಿದೆ. ಆಗಸ್ಟ್ 16 ರಿಂದ ಬೆಲೆ ಏರಿಕೆ ಕಂಡಿದ್ದ ತೈಲ ಬೆಲೆ ಅಕ್ಟೋಬರ್ ವೇಳೆ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 91 ರೂ. ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 80.10 ರೂ. ಏರಿಕೆಯಾಗಿತ್ತು.
Advertisement
ಟ್ರಂಪ್ ಇಫೆಕ್ಟ್:
ನಿರ್ಬಂಧ ಜಾರಿಯಾದ ಬಳಿಕವೂ ಭಾರತ ಸೇರಿದಂತೆ ಜಪಾನ್, ಚೀನಾ, ಇಟಲಿ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್, ತೈವಾನ್, ದಕ್ಷಿಣ ಕೊರಿಯಾ ಒಳಗೊಂಡ 8 ರಾಷ್ಟ್ರಗಳಿಗೆ ಇರಾನ್ ನೊಂದಿಗೆ ತಾತ್ಕಾಲಿಕ ತೈಲ ಖರೀದಿಗೆ ಅಮೆರಿಕ ಅನುಮತಿ ನೀಡಿದೆ. ಹೀಗಾಗಿ ಭಾರತೀಯರು ತೈಲ ಬೆಲೆ ಏರಿಕೆಯಿಂದ ಸದ್ಯಕ್ಕೆ ಪಾರಾಗಿದ್ದಾರೆ. ಹಾಗಿದ್ದರೂ ಓಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ಕಡಿತಕ್ಕೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತೈಲದ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಅಮೆರಿಕ ನಿರ್ಬಂಧ ಏಕೆ?
2015ರಲ್ಲಿ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದ್ದ ಅಮೆರಿಕ, ಈಗ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿ ಈ ವರ್ಷದ ಆರಂಭದಲ್ಲಿ ನಿರ್ಬಂಧ ವಿಧಿಸಿತ್ತು. ನಿರ್ಬಂಧದ ಮೊದಲ ಹಂತ ಆರಂಭದಲ್ಲೇ ಜಾರಿಯಾಗಿದ್ದು, ನವೆಂಬರ್ 4ರಿಂದ ಪೂರ್ಣ ಪ್ರಮಾಣದಿಂದ ಜಾರಿಗೆ ಬಂದಿದೆ.
ಇರಾನ್‍ನಿಂದ ತೈಲ ಆಮದನ್ನು ಅಮೆರಿಕ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಅಲ್ಲದೇ ತನ್ನ ಮಿತ್ರ ರಾಷ್ಟ್ರಗಳು ಸಹ ಇರಾನ್ ನೊಂದಿಗೆ ಖರೀದಿಯನ್ನು ಸ್ಥಗಿತಗೊಳಿಸಲಿವೆ ಎನ್ನುವ ನಿರೀಕ್ಷೆಯನ್ನು ಹೊಂದಿದ್ದೇವೆ. ಇರಾನ್ ಜೊತೆ ಯಾವುದೇ ರೀತಿಯ ವ್ಯವಹಾರವನ್ನು ಮುಂದುವರಿಸುವ ಯಾವುದೇ ದೇಶದೊಂದಿಗೆ ಅಮೆರಿಕಾದ ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಸ್ಥೆಯೊಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
ಇರಾನ್ ಜೊತೆ ತೈಲ ಖರೀದಿಯಲ್ಲಿ ಭಾರತ ಎರಡನೇ ಸ್ಥಾನವನ್ನು ಪಡೆದುಕೊಂಡರೆ, ಮೊದಲನೇ ಸ್ಥಾನದಲ್ಲಿ ಚೀನಾ ಇದೆ. ಅಮೆರಿಕದ ಇರಾನ್ ನಿರ್ಬಂಧ ವಿಶ್ವದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಅಷ್ಟು ಪ್ರಮಾಣದ ತೈಲವನ್ನು ಇರಾನ್ ಹೊರತು ಪಡಿಸಿ, ಎಲ್ಲಿಂದ ಸಂಗ್ರಹಿಸುವುದು ಎನ್ನುವುದರ ಬಗ್ಗೆ ವಿವಿಧ ದೇಶಗಳು ಆತಂಕವನ್ನು ವ್ಯಕ್ತಪಡಿಸಿದ್ದವು.
ಈಗ ತೈಲ ದರ ಕಡಿಮೆಯಾಗುತ್ತಿದ್ದರೂ, ಕೆಲ ದಿನಗಳ ಹಿಂದೆ ಭಾರೀ ಏರಿಕೆಯಾಗಿತ್ತು. ತೈಲ ಖರೀದಿಗೆ ನಿರ್ಬಂಧ ಹೇರಿದ ಸುದ್ದಿಯಿಂದಾಗಿ ಷೇರು ಮಾರುಕಟ್ಟೆಗೂ ಭಾರೀ ಹೊಡೆತ ಬಿದ್ದಿತ್ತು. ಅಷ್ಟೇ ಅಲ್ಲದೇ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತಿತ್ತು. ಈಗ ಈ ನಿರ್ಬಂಧದಿಂದ ಭಾರತವನ್ನು ಹೊರಗೆ ಇಟ್ಟ ಹಿನ್ನೆಲೆಯಲ್ಲಿ ತೈಲ ದರ ಏರಿಕೆಯ ಭೀತಿಯಿಂದ ಸದ್ಯಕ್ಕೆ ಭಾರತೀಯರು ಪಾರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv