– ಪ್ರತಿ ಲೀಟರ್ ಗೆ ಸುಮಾರು 3 ರೂ.ಹೆಚ್ಚಳ
– ಸುಂಕ ಹೆಚ್ಚಾದರೂ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿಕೆ
ನವದೆಹಲಿ: ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದರ ಮಧ್ಯೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ಮತ್ತು ರೋಡ್ ಸೆಸ್ ಹೆಚ್ಚಳ ಮಾಡಿದೆ.
ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲಿನ ವಿಶೇಷ ಅಬಕಾರಿ ಸುಂಕವನ್ನು 2 ರೂ. ಏರಿಕೆ ಮಾಡಿದ್ದರೆ, ರಸ್ತೆ ಸೆಸ್ ಅನ್ನು 1 ರೂ. ಏರಿಸಲಾಗಿದೆ. ವಿಶೇಷ ಅಬಕಾರಿ ಸುಂಕ(ಎಸ್‍ಇಡಿ) ಅಡಿ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ.
Advertisement
Excise duty on both petrol and diesel increased by Rs 3 per litre pic.twitter.com/PZn59cfd5o
— ANI (@ANI) March 14, 2020
Advertisement
ಇಲ್ಲಿಯವರೆಗೆ ಒಂದು ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕ, ರಸ್ತೆ ಸೆಸ್ ಸೇರಿ 19.98 ರೂ. ವಿಧಿಸುತಿದ್ದರೆ ಈಗ ಇದು 22.98 ರೂ.ಗೆ ಏರಿಕೆಯಾಗಿದೆ. ಒಂದು ಲೀಟರ್ ಡೀಸೆಲಿಗೆ 15.83 ರೂ. ಅಬಕಾರಿ ಸುಂಕ ಇದ್ದರೆ ಈಗ ಇದು 18.83 ರೂ.ಗೆ ಏರಿಕೆಯಾಗಿದೆ.
Advertisement
ಕಚ್ಚಾ ತೈಲ ಉತ್ಪದನೆ ರಾಷ್ಟ್ರಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿದ್ದು ಬೆಲೆ ಸಮರ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದೆ.
Advertisement
ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿರುವ ಬೆನ್ನಲ್ಲೇ ಭಾರತದಲ್ಲೂ ದರ ಇಳಿಕೆ ಆಗುತ್ತಾ? ಅಥವಾ ಕೇಂದ್ರ ಸರ್ಕಾರ ಅಬಕಾರಿ ಸುಂಕ ಏರಿಸಿ ಬೆಲೆಯನ್ನು ಸಮತೋಲನದಲ್ಲಿ ಇಡಲಿದ್ಯಾ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 3 ರೂ. ಏರಿಕೆ ಮಾಡಿದೆ. ಅಬಕಾರಿ ಸುಂಕ ಮತ್ತು ರಸ್ತೆ ಸೆಸ್ ಏರಿಕೆ ಮಾಡಿದ್ದರೂ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 34.46 ಡಾಲರ್(2,548 ರೂ.) ತಲುಪಿದೆ.
ಬೆಲೆ ಇಳಿಕೆ ಆಗುತ್ತಿರೋದು ಯಾಕೆ?
ಕೊರೊನಾ ವೈರಸ್ ದಾಳಿಯಿಂದ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ತೈಲ ದರ ಇಳಿಕೆಯಾಗುತ್ತಲೇ ಇತ್ತು. ಈ ದರವನ್ನು ಸ್ಥಿರಗೊಳಿಸುವ ಸಂಬಂಧ ಮತ್ತೆ ಶೇ.4ರಷ್ಟು ಉತ್ಪಾದನೆ ತಗ್ಗಿಸುವ ಕುರಿತಾಗಿ 14 ಸದಸ್ಯರನ್ನು ಒಳಗೊಂಡಿರುವ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ(ಒಪೆಕ್) ಮುಂದಾಗಿತ್ತು. ಮಾರ್ಚ್ ತಿಂಗಳಿಗೆ ಒಪ್ಪಂದ ಕೊನೆಯಾಗಲಿರುವ ಹಿನ್ನೆಲೆಯಲ್ಲಿ ಮತ್ತೆ ಮುಂದುವರಿಸುವಂತೆ ಸೌದಿ ಅರೆಬೀಯಾ ಮಾತುಕತೆಗೆ ಮುಂದಾಗಿತ್ತು. ಆದರೆ ಮತ್ತೆ ಒಪ್ಪಂದ ನಡೆಸಲು ನಾವು ಸಿದ್ಧರಿಲ್ಲ ಎಂದು ರಷ್ಯಾ ಹೇಳಿದ ಬೆನ್ನಲ್ಲೇ ಈಗ ತೈಲ ಉತ್ಪಾದನೆ ನಡೆಸುವ ರಾಷ್ಟ್ರಗಳ ಮಧ್ಯೆ ದರ ಸಮರ ಆರಂಭಗೊಂಡಿದೆ.
ಒಪೆಕ್ ರಾಷ್ಟ್ರಗಳು ಈಗ ಪ್ರತಿದಿನ ಉತ್ಪಾದನೆಯಾಗುತ್ತಿರುವ ತೈಲ ಪ್ರಮಾಣವನ್ನು ಇಳಿಸಲು ಮಾತುಕತೆ ನಡೆಸಿತ್ತು. ಏಪ್ರಿಲ್ ನಿಂದ ಪ್ರತಿದಿನ ಶೇ.1.5 ದಶಲಕ್ಷ ಬ್ಯಾರೆಲ್ (ಶೇ.4ರಷ್ಟು) ಇಳಿಸಿ ಮುಂದಿನ ಡಿಸೆಂಬರ್ ವರೆಗೆ ಈ ಪ್ರಮಾಣದಲ್ಲೇ ತೈಲ ಉತ್ಪಾದನೆ ನಡೆಸಲು ಪ್ರಸ್ತಾಪವನ್ನು ಮುಂದಿಟ್ಟಿತ್ತು. ಆದರೆ ಈ ಪ್ರಸ್ತಾಪವನ್ನು ರಷ್ಯಾ ತಿರಸ್ಕರಿಸಿದ್ದರಿಂದ ಗಲ್ಫ್ ರಾಷ್ಟ್ರಗಳು ಉತ್ಪಾದನೆಯನ್ನು ಹೆಚ್ಚಿಸಿ ದರವನ್ನು ಇಳಿಕೆ ಮಾಡಿದೆ.
ಸೋಮವಾರ ಕಚ್ಚಾ ತೈಲದ ಬೆಲೆಯನ್ನು ಸೌದಿ ಅರೇಬಿಯಾ ಇಳಿಕೆ ಮಾಡಿತ್ತು. ವಿಶ್ವದ ಅತಿ ದೊಡ್ಡ ತೈಲ ಉತ್ಪಾದಕಾ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಏಪ್ರಿಲ್ ನಿಂದ ಈಗ ಇರುವ ಉತ್ಪಾದನೆಗಿಂತ ಹೆಚ್ಚುವರಿಯಾಗಿ ಪ್ರತಿದಿನ 10 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದಿಸುವುದಾಗಿ ಹೇಳಿಕೊಂಡಿದೆ. ಈ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ತೈಲ ಬೆಲೆ ಶೇ.31 ರಷ್ಟು ಇಳಿಕೆಯಾಗಿತ್ತು. ಪರಿಣಾಮ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 35.75 ಡಾಲರ್(2,647 ರೂ.) ಬೆಲೆಯಲ್ಲಿ ಮಾರಾಟವಾಗುತ್ತಿದ್ದ 1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ 31.02 ಡಾಲರಿಗೆ(2,295 ರೂ.) ತಲುಪಿತ್ತು. ಜುಲೈ 2008ರಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 148 ಡಾಲರ್(10,960 ರೂ.) ದರಕ್ಕೆ ಏರಿಕೆ ಆಗಿತ್ತು.
ಚೀನಾದಲ್ಲಿ ಈಗಾಗಲೇ ಕೆಲ ದಿನಗಳಿಂದ ಉತ್ಪಾದನೆ ಸ್ಥಗಿತಗೊಂಡಿದೆ. ಇದರ ಜೊತೆ ದಕ್ಷಿಣ ಕೊರಿಯಾ, ಇಟಲಿಯಲ್ಲಿ ಕೊರೊನಾ ಭಾರೀ ಪ್ರಮಾಣದಲ್ಲಿ ಹಬ್ಬುತ್ತಿದೆ. ಯುರೋಪ್, ಏಷ್ಯಾ ರಾಷ್ಟ್ರಗಳಿಗೆ ಭೀತಿ ಎದುರಾದ ಹಿನ್ನೆಲೆಯಲ್ಲಿ ಈ ಬಾರಿ ತೈಲದ ಬೇಡಿಕೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.
2016ರಲ್ಲಿ ಅಮೆರಿಕದ ಶೇಲ್ ತೈಲ ಉತ್ಪಾದನೆ ತಗ್ಗಿಸಲು ಸೌದಿ ಅರೇಬಿಯಾ, ರಷ್ಯಾ ಮತ್ತು ಮಧ್ಯಪ್ರಾಚ್ಯದ ಇತರ ಉತ್ಪಾದಕ ದೇಶಗಳು ಏಷ್ಯಾದ ಮಾರುಕಟ್ಟೆಗೆ ಕಡಿಮೆ ಬೆಲೆಯಲ್ಲಿ ತೈಲವನ್ನು ಪೂರೈಕೆ ಮಾಡಿದ್ದವು. ಈಗ ಈ ಒಪ್ಪಂದದಿಂದ ಹಿಂದೆ ಸರಿದ ರಷ್ಯಾಕ್ಕೆ ಪಾಠ ಕಲಿಸಲು ಸೌದಿ ಭಾರೀ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಮುಂದಾಗಿದೆ. ಬೆಲೆ ಕಡಿಮೆ ಮಾಡಿದರೆ ಖರೀದಿಸಲು ಬೇಡಿಕೆ ಹೆಚ್ಚಾಗುವುದರಿಂದ ಯುರೋಪ್ ಮತ್ತು ಏಷ್ಯಾದಲ್ಲಿ ರಷ್ಯಾ ಜೊತೆಗೆ ಪೈಪೋಟಿ ನಡೆಸಿ ಮಾರುಕಟ್ಟೆಯನ್ನು ತನ್ನತ್ತ ಸೆಳೆಯಲು ಸೌದಿ ಮುಂದಾಗಿದೆ.
ಕೊರೊನಾ ವೈರಸ್ ದಾಳಿಯಿಂದ ಇಡೀ ವಿಶ್ವದಲ್ಲಿ ಈಗ ಉತ್ಪಾದನೆ ಕಡಿಮೆಯುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ನಿರಂತರವಾಗಿ ಇಳಿಕೆಯಾಗುತ್ತಿದೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಮಂದಗತಿಯಲ್ಲಿರುವುದರಿಂದ ತೈಲದ ಬೇಡಿಕೆ ಇಳಿದಿದ್ದು, ಬೆನ್ನಿಗೇ ದರವೂ ಇಳಿಕೆಯಾಗುತ್ತಿದೆ. ಎಷ್ಟು ಇಳಿಕೆಯಾಗಿದೆ ಎಂದರೆ 2018ರ ಆಗಸ್ಟ್ ನಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 72 ಡಾಲರ್ ಇತ್ತು. ಚೀನಾ ಅಮೆರಿಕ ವಾಣಿಜ್ಯ ಸಮರ ಮತ್ತಷ್ಟು ಹೆಚ್ಚಾಗಿದ್ದರಿಂದ ಕಳೆದ ವರ್ಷ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 58 ಡಾಲರ್ ತಲುಪಿತ್ತು.
ಭಾರತಕ್ಕೆ ಲಾಭ ಹೇಗೆ?
ಚೀನಾ, ಅಮೆರಿಕದ ನಂತರ ವಿಶ್ವದಲ್ಲೇ ಅತಿ ಹೆಚ್ಚು ತೈಲವನ್ನು ಆಮದು ಮಾಡುತ್ತಿರುವ ದೇಶ ಭಾರತವಾಗಿದ್ದು, ದೇಶದ ಆರ್ಥಿಕತೆ ಮೇಲೆ ತೈಲ ದರ ಭಾರೀ ಪ್ರಭಾವ ಬೀರುತ್ತದೆ. ಭಾರತವು ತನ್ನ ಬೇಡಿಕೆಯ ಶೇ.80ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ತೈಲ ದರದಲ್ಲಿ ಇಳಿಕೆಯಾದರೆ ಆಮದು ಹೊರೆಯೂ ಕಡಿಮೆಯಾಗಲಿದೆ. ರಫ್ತು ವಹಿವಾಟಿನ ನಡುವಣ ಅಂತರವಾದ ಚಾಲ್ತಿ ಖಾತೆ ಕೊರತೆಯೂ ಇಳಿಕೆಯಾಗಲಿದೆ.
2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 108 ಡಾಲರ್(ಅಂದಾಜು 7,750 ರೂ.) ಇತ್ತು. ಮೋದಿ ಸರ್ಕಾರ ಮೂರನೇ ವರ್ಷದ ಅವಧಿಯಲ್ಲಿ 48 ಡಾಲರ್(3,400 ರೂ.) ಬೆಲೆಗೆ ಇಳಿಕೆಯಾಗಿತ್ತು. ಈಗ ಎರಡನೇ ಅವಧಿಯ ಮೊದಲ ವರ್ಷದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 31 ಡಾಲರ್ ತಲುಪಿದೆ. ಈ ದರ ಹಲವು ತಿಂಗಳ ಕಾಲ ಸ್ಥಿರವಾಗಬಹುದು ಅಥವಾ ಮತ್ತಷ್ಟು ದರ ಕಡಿಮೆಯಾಗಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದಿಂದ 2018-19ರ ಹಣಕಾಸು ವರ್ಷದಲ್ಲಿ ಸರ್ಕಾರ 2.579 ಕೋಟಿ ರೂ. ಆದಾಯ ಸಂಗ್ರಹಿಸಿತ್ತು. 2013-14ರ ಅವಧಿಯಲ್ಲಿ 88,600 ಕೋಟಿ ರೂ. ಸಂಗ್ರಹಿಸಿದ್ದರೆ 2017-18ರ ಅವಧಿಯಲ್ಲಿ 2,016 ಕೋಟಿ ಆದಾಯ ಸಂಗ್ರಹಿಸಿತ್ತು. ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಸಂಗ್ರಹವನ್ನು ಹಣವನ್ನು ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು ಎಂದು ಕೇಂದ್ರ ಸರ್ಕಾರ ಸಮರ್ಥನೆ ನೀಡಿದೆ.