ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ 2025ನ್ನು (Waqf Amendment Act 2025) ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಮುಂದಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ (Justice BR Gavai) ನೇತೃತ್ವದ ಪೀಠದಲ್ಲಿ ನಡೆಯಲಿದೆ.
ಸಿಜೆಐ ಸಂಜೀವ್ ಖನ್ನಾ ಅವರು ನಿವೃತ್ತರಾಗಲು ಕೆಲವೇ ದಿನಗಳು ಬಾಕಿ ಇರುವ ಕಾರಣ ಇಂದು ಈ ಅರ್ಜಿ ವಿಚಾರಣೆಯನ್ನು ಮುಂದಿನ ಸಿಜೆಐ ಪೀಠಕ್ಕೆ ವರ್ಗಾಯಿಸಿದರು. ನ್ಯಾ. ಬಿ.ಆರ್ ಗವಾಯಿಯವರು ಮೇ 14 ರಂದು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲಿದ್ದು, ಅರ್ಜಿಗಳ ಮುಂದಿನ ವಿಚಾರಣೆ ಮೇ 15ರಂದು ನಡೆಯಲಿದೆ. ಇದನ್ನೂ ಓದಿ: ವಕ್ಫ್ ಸದ್ಬಳಕೆ ಆಗಿದ್ದರೆ ಮುಸ್ಲಿಮರು ಪಂಕ್ಚರ್ ಹಾಕುತ್ತಿರಲಿಲ್ಲ: ಮೋದಿ
ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ (Supreme Court) ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ತಕ್ಷಣ, ಸಿಜೆಐ ಖನ್ನಾ ಅವರು ಕೇಂದ್ರದ ಪ್ರತಿ-ಅಫಿಡವಿಟ್ ಮತ್ತು ಅರ್ಜಿದಾರರ ಮರು-ಅಫಿಡವಿಟ್‌ಗಳನ್ನು ಪರಿಶೀಲಿಸಿರುವುದಾಗಿ ಹೇಳಿದರು. ಈ ವಿಚಾರದಲ್ಲಿ ಮಧ್ಯಂತರ ತೀರ್ಪು ಕಾಯ್ದಿರಿಸಲು ಬಯಸುವುದಿಲ್ಲ. ಇದಕ್ಕಾಗಿ ಶೀಘ್ರ ವಿಚಾರಣೆಯ ಅಗತ್ಯವಿದೆ. ಆದ್ದರಿಂದ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠ ಈ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ ಎಂದರು.
ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಎ.ಎಂ. ಸಿಂಗ್ವಿ ಮತ್ತು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಿಜೆಐ ಅವರ ಸಲಹೆಯನ್ನು ಒಪ್ಪಿಕೊಂಡರು.
ನ್ಯಾಯಾಲಯವು ಏ.16 ಮತ್ತು 17 ರಂದು ಈ ಅರ್ಜಿಗಳ ವಿಚಾರಣೆ ನಡೆಸಿತ್ತು. ಏಪ್ರಿಲ್ 16 ರಂದು, ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಈ ವೇಳೆ 2025ರ ತಿದ್ದುಪಡಿ ಕಾಯ್ದೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದರಿಂದ ಶತಮಾನಗಳಷ್ಟು ಹಳೆಯದಾದ ಮಸೀದಿಗಳು, ದರ್ಗಾಗಳು ಇತ್ಯಾದಿಗಳ ನೋಂದಣಿ ದಾಖಲೆಗಳನ್ನು ಸಾಬೀತುಪಡಿಸುವುದು ಅಸಾಧ್ಯ ಎಂದು ಅವರು ವಾದಿಸಿದ್ದರು. ಇದಕ್ಕೆ ವಿರುದ್ಧವಾಗಿ, ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು. ವಕ್ಫ್ ಆಸ್ತಿಗಳನ್ನು ನೋಂದಣಿ ಮಾಡಿದ್ದರೆ ವಕ್ಫ್ ಸ್ವತ್ತಾಗಿಯೇ ಉಳಿಯುತ್ತವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಎಐಎಂಐಎಂ ಸಂಸದ ಅಸದುದ್ದೀನ್ ಓವೈಸಿ, ದೆಹಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್, ನಾಗರಿಕ ಹಕ್ಕುಗಳ ರಕ್ಷಣಾ ಸಂಘ, ಜಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಅರ್ಷದ್ ಮದನಿ, ಸಮಸ್ತ ಕೇರಳ ಜಮಿಯತ್ ಉಲೇಮಾ, ಅಂಜುಮ್ ಕದರಿ, ತೈಯಬ್ ಖಾನ್ ಸಲ್ಮಾನಿ, ಮೊಹಮ್ಮದ್ ಶಫಿ, ಟಿಎಂಸಿ ಸಂಸದ ಮಹುವಾ ಮೊಯಿತ್ರಾ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ, ಎಸ್‌ಪಿ ಸಂಸದ ಜಿಯಾ ಉರ್ ರೆಹಮಾನ್, ಕಮ್ಯುನಿಸ್ಟ್ ಪಾರ್ಟ್ ಆಫ್ ಇಂಡಿಯಾ, ಡಿಎಂಕೆ ಸೇರಿದಂತೆ ಹಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ವಕ್ಫ್ ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಎಎಪಿ