ನವದೆಹಲಿ: ಚಲನಚಿತ್ರಗಳು (Movies) ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ತಂಬಾಕು ವಿರೋಧಿ ಎಚ್ಚರಿಕೆ (Anti Tobacco Warning) ಸಂದೇಶಗಳನ್ನು ಪ್ರದರ್ಶಿಸುವುದರ ವಿರುದ್ಧ ಅರ್ಜಿ ಸಲ್ಲಿಸಿದ್ದ ವಕೀಲರನ್ನು ದೆಹಲಿ ಹೈಕೋರ್ಟ್ (Delhi High Court) ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದು, ಎರಡು ದಿನಗಳಲ್ಲಿ ವಿಷಾದ ವ್ಯಕ್ತಪಡಿಸಿ ಅಫಿಡವಿಟ್ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದೆ.
ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠದ ಅರ್ಜಿಯನ್ನು ವಜಾ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರ ಪೀಠವು, ಈ ವಿಷಯದಲ್ಲಿ ಸಂಪೂರ್ಣ ವಿಷಾದದ ಅಗತ್ಯವಿದೆ. ಅದಕ್ಕಿಂತ ಕಡಿಮೆ ಏನು ಇಲ್ಲ. ಎರಡು ದಿನದಲ್ಲಿ ವಿಷಾದ ವ್ಯಕ್ತಪಡಿಸಿ ಅಫಿಡವಿಟ್ ಸಲ್ಲಿಸುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಬುಧವಾರ ನಡೆಯಬೇಕಿದ್ದ INDIA ಒಕ್ಕೂಟದ ಸಭೆ ಮುಂದೂಡಿಕೆ
ವಕೀಲರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ದುರುಪಯೋಗಪಡಿಸಿಕೊಂಡಿರುವುದರಿಂದ ಇಂತಹ ಅರ್ಜಿಗಳು ಕೋರ್ಟ್‌ಗೆ ಬರುತ್ತಿವೆ. ದೇಶದಲ್ಲಿ ಕ್ಯಾನ್ಸರ್ ಹರಡುತ್ತಿದೆ. ಕ್ಯಾನ್ಸರ್ ಹೇಗೆ ಹರಡುತ್ತಿದೆ ಎಂಬುದರ ಕುರಿತು ಜನರಿಗೆ ಅರಿವು ಮೂಡಿಸದಿದ್ದರೆ ಯುವ ಪೀಳಿಗೆ ತಪ್ಪು ಹಾದಿ ಹಿಡಿಯಬಹುದು. ತಂಬಾಕು ಲಾಬಿಗೆ ಪೂರಕವಾಗಿ ಅರ್ಜಿ ಸಲ್ಲಿಸಿರುವುದು ಸಮಂಜಸವಲ್ಲ. ಈ ಹಿನ್ನೆಲೆ ಇಂತಹ ಅರ್ಜಿಯನ್ನು ಸಲ್ಲಿಸುವ ವಕೀಲರು ವಿಷಾದ ವ್ಯಕ್ತಪಡಿಸದೇ ಬೇರೆ ಆಯ್ಕೆ ಇಲ್ಲ. ಡಿಸೆಂಬರ್ 7ರೊಳಗೆ ವಿಷಾದ ವ್ಯಕ್ತಪಡಿಸಿ ಅಫಿಡವಿಟ್ ಸಲ್ಲಿಸಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ತೆಲಂಗಾಣ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಡಿ.7ಕ್ಕೆ ಪ್ರಮಾಣ ವಚನ?
ಇದಕ್ಕೂ ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್, ಅರ್ಜಿಯು ದುರುದ್ದೇಶದಿಂದ ಕೂಡಿದೆ. ತಂಬಾಕು ವಿರುದ್ಧ ಜಾಗೃತಿ ಮೂಡಿಸುವ ಸರ್ಕಾರವನ್ನು ತಡೆಯಲು ತಂಬಾಕು ಉದ್ಯಮದ ಲಾಬಿಯ ಬೆಂಬಲ ಈ ಅರ್ಜಿಯ ಹಿಂದೆ ಇದೆ ಎಂದು ಹೇಳಿದರು. ಭವಿಷ್ಯದಲ್ಲಿ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸುವುದರ ವಿರುದ್ಧ ವಕೀಲರಿಗೆ ಎಚ್ಚರಿಕೆ ನೀಡಲು ಅನುಕರಣೀಯ ವೆಚ್ಚಗಳೊಂದಿಗೆ ವಜಾಗೊಳಿಸಲು ಅರ್ಹರು ಎಂದು ಅಭಿಪ್ರಾಯಪಟ್ಟಿದ್ದರು. ಇದನ್ನೂ ಓದಿ: ಶ್ರೀರಾಮ ಮಂದಿರ ಉದ್ಘಾಟನೆಗೆ 2,500 ಸಂತರಿಗೆ ಆಹ್ವಾನ – ದಂಡ, ಚನ್ವಾರ್, ಛತ್ರ, ಪಾದುಕೆ ತರದಂತೆ ಮನವಿ