ಚಿತ್ರದುರ್ಗ: ಮಠ ಮಾನ್ಯಗಳಲ್ಲಿ ಜಾತ್ರೆ ಉತ್ಸವಗಳ ವೇಳೆ ಪುರಾಣ ಪ್ರವಚನಗಳನ್ನು ಆಯೋಜಿಸುವುದು ಸಹಜ. ಆದರೆ ಕೋಟೆನಾಡು ಚಿತ್ರದುರ್ಗದ ಮುರುಘಾಮಠದಲ್ಲಿ ಮಾತ್ರ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸಾಕು ಪ್ರಾಣಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಹೀಗಾಗಿ ನೂರಾರು ಜನ ತಮ್ಮ ಶ್ವಾನಗಳೊಂದಿಗೆ ಪ್ರದರ್ಶನದಲ್ಲಿ ಭಾಗಿಯಾಗಿದರು. ಅಂತೆಯೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಅವರ ಜೋಡೆತ್ತುಗಳನ್ನು ಪ್ರದರ್ಶಿಸಿದರು.
ಈ ವೇಳೆ ಎತ್ತಿನ ಗಾಡಿಯಲ್ಲಿ ಆಗಮಿಸಿದ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹಾಗೂ ಕೃಷಿ ಸಚಿವ ಶಿವಶಂಕರರೆಡ್ಡಿ ಸಾಕು ಪ್ರಾಣಿ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವೇಳೆ ಈ ಪ್ರದರ್ಶನದ ಉಸ್ತುವಾರಿ ಹೊತ್ತಿದ್ದ ರಮಾನಂದ ಸ್ವಾಮೀಜಿ ಸಾಕುಪ್ರಾಣಿ ಪ್ರದರ್ಶನದ ಆಯೋಜನೆ ಕುರಿತು ಮಾತನಾಡಿದರು.
Advertisement
Advertisement
ಈ ಶ್ವಾನ ಪ್ರದರ್ಶನ ಮತ್ತು ಜೋಡೆತ್ತುಗಳ ಪ್ರದರ್ಶನಕ್ಕೆ ತೀರ್ಪುಗಾರರನ್ನಾಗಿ ನುರಿತ ತಜ್ಞರನ್ನು ನೇಮಿಸಲಾಗಿತ್ತು. ಅವರು ಈ ಶ್ವಾನ ಹಾಗೂ ಜೋಡೆತ್ತುಗಳನ್ನ ವೀಕ್ಷಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಘೋಷಿಸಿದ್ದು, ಶ್ವಾನ ಪ್ರದರ್ಶನದಲ್ಲಿ ನಯನಾ ಎಂಬವರಿಗೆ ಸೇರಿದ ಮುಧೋಳ ಜಾತಿಯ ನಾಯಿ ಪ್ರಥಮ ಸ್ಥಾನ ಪಡೆದು 10 ಸಾವಿರ ನಗದು ಮತ್ತು ಪುರಸ್ಕಾರಕ್ಕೆ ಪಾತ್ರವಾಯಿತು. ಅಂತೆಯೇ ಗೊಡಬನಾಳ ಸತೀಶ್ ಪಟೇಲ್ ಎಂಬವರ ಅಮೃತ ಮಹಲ್ ಜಾತಿಯ ಜೋಡೆತ್ತು ಇಲ್ಲಿ ಮೊದಲ ಸ್ಥಾನ ಪಡೆಯಿತು. ಈ ವೇಳೆ ಪ್ರಾಣಿ ಪ್ರಿಯರು ಕೂಡ ಈ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
Advertisement
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಮುರುಘಾಮಠದಲ್ಲಿ ಮಂಗಳವಾರ ಶರಣ ಸಂಸ್ಕೃತಿ ಉತ್ಸವದ ನೆಪದಲ್ಲಿ ಪ್ರಾಣಿಗಳ ಉತ್ಸವವೂ ನಡೆಯಿತು. ನೂರಾರು ಜಾತಿಯ ನಾಯಿಗಳು, ಹತ್ತಾರು ತಳಿಯ ಜಾನುವಾರುಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಅನೇಕ ಪ್ರಾಣಿ ಪ್ರಿಯರು ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ಭಾಗಿಯಾಗಿ ಫುಲ್ ಏಂಜಾಯ್ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv