ಉಗ್ರರಿಗೆ ನಾವು ತರಬೇತಿ ನೀಡಿದ್ದೇವೆ, ಲಾಡೆನ್ ನಮ್ಮ ಹೀರೋ – ಪರ್ವೇಜ್ ಮುಷರಫ್

Public TV
1 Min Read
musharraf

– ಭಾರತೀಯ ಸೇನೆ ವಿರುದ್ಧ ಹೋರಾಡಲು ತರಬೇತಿ
– ಶಸ್ತ್ರಾಸ್ತ್ರಗಳನ್ನು ನಾವೇ ನೀಡುತ್ತೇವೆ

ಇಸ್ಲಾಮಾಬಾದ್: ಭಾರತೀಯ ಸೇನೆಯ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಒಪ್ಪಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮುಷರಫ್ ಈ ಕುರಿತು ಮಾತನಾಡಿರುವ ವಿಡಿಯೋವನ್ನು ಪಾಕಿಸ್ತಾನದ ರಾಜಕಾರಣಿ ಫರ್ಹತುಲ್ಲಾ ಬಾಬರ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜಿಹಾದಿಗಳನ್ನು ಪಾಕಿಸ್ತಾನದ ಹೀರೋಗಳು ಎಂದು ಕರೆದಿದ್ದಾರೆ.

ಪಾಕಿಸ್ತಾನಕ್ಕೆ ಆಗಮಿಸಿದ್ದ ಕಾಶ್ಮೀರಿಗಳನ್ನು ಇಲ್ಲಿ ಹೀರೋಗಳಂತೆ ಸ್ವಾಗತಿಸಲಾಗಿದೆ. ಅವರಿಗೆ ತರಬೇತಿ ನೀಡಿ ಬೆಂಬಲ ನೀಡುತ್ತಿದ್ದೇವೆ. ಅವರನ್ನು ಮುಜಾಹಿದ್ದೀನ್‍ಗಳೆಂದು ಪರಿಗಣಿಸಿದ್ದು, ಭಾರತೀಯ ಸೈನಿಕರೊಂದಿಗೆ ಹೋರಾಡಲಿದ್ದಾರೆ. ನಂತರ ಲಷ್ಕರ್-ಎ-ತೋಯ್ಬಾದಂತಹ ವಿವಿಧ ಭಯೋತ್ಪಾದಕ ಸಂಘಟನೆಗಳು ಹೆಚ್ಚಳವಾಗಲಿವೆ. ಈ ಮೂಲಕ ಜಿಹಾದಿಗಳು ನಮ್ಮ ಹೀರೋಗಳಾಗುತ್ತಾರೆ ಎಂದು ಕೊಂಡಾಡಿದ್ದಾರೆ.

ಒಸಾಮಾ ಬಿನ್ ಲಾಡೆನ್ ಹಾಗೂ ಜಲಾಲುದ್ದೀನ್ ಹಕ್ಕಾನಿಯಂತಹ ಭಯೋತ್ಪಾದಕರು ಹೀರೋಗಳು. 1979ರಲ್ಲಿ ನಾವು ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ಅಫ್ಘಾನಿಸ್ಥಾನದಲ್ಲಿನ ಸೋವಿಯತ್ ದೇಶವನ್ನು ಹೊರಗೆ ತಳ್ಳಲು ಧಾರ್ಮಿಕ ಭಯೋತ್ಪಾದನೆಯನ್ನು ಪರಿಚಯಿಸಿದೆವು. ಮುಜಾಹಿದ್ದೀನ್‍ಗಳನ್ನು ಪ್ರಪಂಚದಾದ್ಯಂತ ಕರೆತಂದಿದ್ದೇವೆ. ಅವರಿಗೆ ತರಬೇತಿ ನೀಡುತ್ತಿದ್ದೇವೆ, ಅಲ್ಲದೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದೇವೆ. ತಾಲಿಬಾನಿಗಳಿಗೂ ತರಬೇತಿ ನೀಡುತ್ತಿದ್ದೇವೆ. ಅವರೂ ಸಹ ನಮ್ಮ ಹೀರೋಗಳು. ಹಕ್ಕಾನಿ, ಒಸಾಮಾ ಬಿನ್ ಲಾಡೆನ್, ಜವಾಹಿರಿ ನಮ್ಮ ನಾಯಕರಾಗಿದ್ದರು. ನಂತರ ನಮ್ಮ ಜಾಗತಿಕ ವಾತಾವರಣ ಬದಲಾಯಿತು. ಜಗತ್ತು ವಿಷಯಗಳನ್ನು ವಿಭಿನ್ನವಾಗಿ ನೋಡಲಾರಂಭಿಸಿತು. ನಮ್ಮ ಹೀರೋಗಳನ್ನು ಖಳನಾಯಕರನ್ನಾಗಿ ಮಾಡಲಾಯಿತು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

terrorists

ಕಾಶ್ಮೀರದಲ್ಲಿ ನಮ್ಮ ಯಾವುದೇ ಹಸ್ತಕ್ಷೇಪವಿಲ್ಲ ಎನ್ನುವ ಪಾಕಿಸ್ತಾನದ ಬಣ್ಣವನ್ನು ಸ್ವತಃ ಮುಷರಫ್ ಬಟಾಬಯಲು ಮಾಡಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದೆ. ಭಯೋತ್ಪಾದಕತೆ ಉತ್ತೇಜಿಸಲು ಅವರಿಗೆ ಸುರಕ್ಷಿತ ತಾಣವನ್ನು ಒದಗಿಸುತ್ತಿದೆ ಎಂದು ಮುಷರಫ್ ಹೇಳಿಕೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *