ಬೆಂಗಳೂರು: ಇತ್ತೀಚೆಗಷ್ಟೇ ನಗರದಲ್ಲಿ ರುಂಡ ಮತ್ತು ಗುಪ್ತಾಂಗವನ್ನು ಕತ್ತರಿಸಿ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ಶ್ವಾನ ಜಿಮ್ಮಿ ಪತ್ತೆಹಚ್ಚಿದ್ದು, ಇದೀಗ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು. ಒಡಿಶಾ ಮೂಲದ ಗಾಂಧಿ ಜೆರಾಯ್ ಮತ್ತು ಮಧು ಜೆರಾಯ್ ಬಂಧಿತರು.
Advertisement
ಏನಿದು ಘಟನೆ?: ಇದೇ ತಿಂಗಳ 11 ರಂದು ಎಲೆಕ್ಟ್ರಾನಿಕ್ ಸಿಟಿಯ ದೊಡ್ಡ ತೋಗೂರಿನ ನೈಸ್ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿತ್ತು. ಕೊಲೆಯ ಬಳಿಕ ದುಷ್ಕರ್ಮಿಗಳು ಮೃತ ವ್ಯಕ್ತಿಯ ರುಂಡ ಮತ್ತು ಗುಪ್ತಾಂಗವನ್ನ ಕತ್ತರಿಸಿಕೊಂಡು ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದು, ಇದೀಗ ಸ್ಥಳಕ್ಕೆ ಬಂದ ಶ್ವಾನ ಜಿಮ್ಮಿ ಸಹಾಯದಿಂದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
Advertisement
ಶ್ವಾನ ಪತ್ತೆ ಹಚ್ಚಿದ್ದು ಹೇಗೆ?: ಆರೋಪಿಗಳು ಮೊದಲು ಕಬ್ಬಿಣದ ರಾಡ್ ನಿಂದ ಮಾಂಜಿಯ ತಲೆಗೆ ಹೊಡೆದಿದ್ರು. ಈ ವೇಳೆ ಹುಲ್ಲಿನೊಳಗೆ ಮರೆಯಾಗಿದ್ದ ತಲೆಯ ಚಿಪ್ಪನ್ನು ಶ್ವಾನ ಜಿಮ್ಮಿ ಪತ್ತೆ ಹಚ್ಚಿದೆ. ಮಾಂಜಿಯ ಕತ್ತು ಕೊಯ್ಯುವ ಮುನ್ನ ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾರೆ ಅನ್ನೋದು ಕನ್ಫರ್ಮ್ ಆಗುತ್ತಿದ್ದಂತೆಯೇ ಜಿಮ್ಮಿ ಆರೋಪಿಗಳ ಮನೆಯ ಬೀದಿಯನ್ನ ತೋರಿಸಿತ್ತು. ಹೀಗಾಗಿ ಕೊಲೆ ಆರೋಪಿಗಳನ್ನ ಶೀಘ್ರದಲ್ಲಿ ಪತ್ತೆಹಚ್ಚಲು ಜಿಮ್ಮಿ ನೆರವಾಯ್ತು.
Advertisement
Advertisement
ಕೊಲೆ ರಹಸ್ಯ ಬಯಲು: ಆರೋಪಿಗಳು ಬಿರಾಂಚಿ ಮಾಂಜಿ ಎಂಬವನ ಜೊತೆಯಲ್ಲಿ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ರು. ಮೂವರು ಹೊಸೂರು ರಸ್ತೆಯ ಶಾಹಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಿದ್ರು. ಆರೋಪಿಗಳ ಸಹೋದರಿಯರಿಬ್ಬರು ಸಹ ಒಡಿಶಾದಿಂದ ಬಂದು ಪಿಜಿಯಲ್ಲಿದ್ದುಕೊಂಡು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಿದ್ರು. ಕಳೆದ ಜುಲೈನಲ್ಲಿ ಆರೋಪಿಗಳ ಸಹೋದರಿ ಸಾವಿತ್ರಿ ಜೆರಾಯ್ ಹೊಟ್ಟೆ ನೋವು ಅಂತಾ ಒರಿಸ್ಸಾಗೆ ವಾಪಸ್ ಹೋಗಿದ್ದಳು. ಎರಡು ತಿಂಗಳ ನಂತರ ಆಕೆಗೆ ಹೊಟ್ಟೆ ನೋವು ಜಾಸ್ತಿಯಾದಾಗ ಆಸ್ಪತ್ರೆಗೆ ತೋರಿಸಲಾಗಿತ್ತು. ಈ ವೇಳೆ ಮದುವೆಗೂ ಮುಂಚೆಯೇ ಸಾವಿತ್ರಿ ಜೆರಾಯ್ ಗರ್ಭಿಣಿಯಾಗಿರೋದು ತಿಳಿದುಬಂತು.
ಇಡೀ ಊರಿಗೆ ಸುದ್ದಿ ಗೊತ್ತಾಗಿ ಕುಟುಂಬದ ಮಾನ ಮರ್ಯಾದೆ ಹೋಗಿರುತ್ತೆ. ಇದಕ್ಕೆಲ್ಲಾ ಕಾರಣ ಜೊತೆಯಲ್ಲಿದ್ದ ಸ್ನೇಹಿತ ಬಿರಾಂಚಿ ಮಾಂಜಿ ಅಂತ ಆರೋಪಿಗಳಿಗೆ ಗೊತ್ತಾಗುತ್ತದೆ. ಹೀಗಾಗಿ ಒಡಿಶಾ ಆರೋಪಿಗಳ ಸಂಬಂಧಿ ಕಾಶೀರಾಮ್ ಬೆಂಗಳೂರಿಗೆ ಬಂದು ಬಿರಾಂಚಿ ಮಾಂಜಿಯನ್ನ ಕೊಲೆ ಮಾಡಲು ಸ್ಕೆಚ್ ಹಾಕ್ತಾರೆ. ಅದರಂತೆ ಇದೇ ತಿಂಗಳ 11ರಂದು ಎಣ್ಣೆ ಹೊಡಿಯೋಕೆ ಅಂತಾ ಮಾಂಜಿಯನ್ನ ಹೊರಗೆ ಕರೆದುಕೊಂಡು ಹೋಗ್ತಾರೆ. ಬಾರ್ ನಲ್ಲಿ ಸ್ವಲ್ಪ ಹೊತ್ತು ಕುಡಿದ ನಂತರ ಬಯಲಿನಲ್ಲಿ ಕುಡಿಯೋಣವೆಂದು ಮಾಂಜಿಯನ್ನ ಕರೆದೊಯ್ತಾರೆ. ಈ ವೇಳೆ ಮಾಂಜಿ ಕುಡಿಯೋದಕ್ಕೆ ತಲೆ ಬಗ್ಗಿಸಿದಾಗ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡ್ತಾರೆ. ನಂತರ ಹುಲ್ಲಿನ ಮೇಲೆ ಶವವನ್ನು ಎಳೆದೊಯ್ದು ಕತ್ತು ಕತ್ತರಿಸ್ತಾರೆ. ತಮ್ಮ ಅಕ್ಕನನ್ನು ಗರ್ಭಿಣಿ ಮಾಡಿ ಊರಿನಲ್ಲಿ ಮಾನ ಮರ್ಯಾದೆ ಕಳೆದರು ಅಂತಾ ಮರ್ಮಾಂಗ ಕತ್ತರಿಸಿರುವುದಾಗಿ ತನಿಖೆಯ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಸದ್ಯ ಆರೋಪಿಗಳಿಂದ ಕೊಲೆಯಾದ ಮಾಂಜಿಯ ರುಂಡವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಕಾಶೀರಾಮ್ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ.