ಬಾಗಲಕೋಟೆ: ಆಸ್ತಿ ವಿಚಾರವಾಗಿ ನಡೆದ ಕಲಹದ ಹಿನ್ನೆಲೆಯಲ್ಲಿ ಅಣ್ಣನಿಂದಲೇ ತಮ್ಮನ ಕುಟುಂಬ ಕಿಡ್ನ್ಯಾಪ್ ಆಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿ ಪಟ್ಟಣದಲ್ಲಿ ನಡೆದಿದೆ.
ಶಂಕರ್ ಉರ್ಫ್ ರಾಜಶೇಕರ್ ಸೋರಗಾವಿ ಸಹೋದರನ ಕುಟುಂಬಸ್ಥರನ್ನ ಕಿಡ್ನ್ಯಾಪ್ ಮಾಡಿಸಿರುವ ವ್ಯಕ್ತಿ. ಮೂಲತಃ ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿರುವ ಶಂಕರ್ ಸೋರಗಾವಿ, ಸಚಿವೆ ಉಮಾಶ್ರೀ ಆಪ್ತ ಸಹ ಆಗಿದ್ದಾನೆ.
ಈ ಹಿಂದೆ ಆಸ್ತಿ ವಿಚಾರವಾಗಿ ಅಣ್ಣ ಶಂಕರ್ ಹಾಗೂ ತಮ್ಮ ಯಶವಂತ್ ಸೋರಗಾವಿ ಮಧ್ಯೆ ಕಲಹವಾಗಿತ್ತು. ಅಲ್ಲದೆ ಶಂಕರ್ ಯಶವಂತ ಹಾಗೂ ಮನೆಯವರ ಮೇಲೆ ಹಲ್ಲೆಯನ್ನೂ ನಡೆಸಿದ್ದ. ಈ ಬಗ್ಗೆ ಕಳೆದ ವರ್ಷ ಆಕ್ಟೋಬರ್ 14ರಂದು ಹಲ್ಲೆಗೊಳಗಾದ ಯಶವಂತ್ ಕುಟುಂಬದವರು ಆಗಿನ ಪೊಲೀಸ್ ವರೀಷ್ಠಾಧಿಕಾರಿ ಎಂಎನ್ ನಾಗರಾಜ್ ಬಳಿ ದುಗುಡ ಹೇಳಿಕೊಂಡು ದೂರು ದಾಖಲಿಸಿದ್ದರು.
ಆದ್ರೆ ಕಳೆದ ತಡರಾತ್ರಿ ಯಶವಂತ ಅವರ ಮನೆಗೆ ನುಗ್ಗಿದ್ದ ಅಪಹರಣಕಾರರು ಯಶವಂತ್ ಸೋರಗಾವಿ, ಪತ್ನಿ ಮಂಜುಳಾ, ಮಕ್ಕಳಾದ ವಿಶಾಲ್ ಪ್ರಶಾಂತ್ ಹಾಗೂ ವಿದ್ಯಾಶ್ರೀ ಅವರ ಮೇಲೆ ಹಲ್ಲೆ ನಡೆಸಿ, ಕ್ರೂಸರ್ ವಾಹನದಲ್ಲಿ ಅವ್ರನ್ನೆಲ್ಲ ಹೊತ್ತೊಯ್ದಿದ್ದಾರೆ. ಈ ಎಲ್ಲ ಕೃತ್ಯಕ್ಕೆ ಯಶವಂತ ಅಣ್ಣ ಶಂಕರ್ ಸೋರಗಾವಿ ಕಾರಣ ಎಂದು ಸ್ವತಃ ಯಶವಂತ್ ತಾಯಿ ಗೌರಮ್ಮ ಹೇಳಿದ್ದಾರೆ.
ಸದ್ಯ ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಗೌರಮ್ಮ ಅವರು ಪ್ರಕರಣ ದಾಖಲಿಸಿದ್ದು, ಕಿಡ್ನ್ಯಾಪ್ ಆದ ಯಶವಂತ್ ಮನೆಯವರ ಹುಡುಕಾಟ ನಡೆಸಿದ್ದಾರೆ.