Connect with us

Districts

ವೈಯಕ್ತಿಕವಾಗಿ ನಾನು ಒಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ: ಸಿಎಂ ಎಚ್‍ಡಿಕೆ

Published

on

ಗದಗ: ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ ಅಗಲಿಕೆಯಿಂದ ನನಗೆ ತುಂಬಾ ಆಘಾತವಾಗಿದ್ದು, ವೈಯಕ್ತಿಕವಾಗಿ ಒಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ತೋಂಟದಾರ್ಯ ಶ್ರೀಗಳ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಶ್ರೀಗಳು ಉತ್ತರ ಕರ್ನಾಟಕದ ಬಗ್ಗೆ ನನಗೆ ಹಲವಾರು ಹೊಸ ವಿಚಾರಗಳನ್ನು ತಿಳಿಸಿದ್ದರು. ಈ ನಾಡಿಗೆ ಅವರು ಸಾಹಿತ್ಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಕೊಟ್ಟ ಕಾಣಿಕೆ ಅಪಾರವಾದದ್ದು, ಅವರ ನಿಧನದ ಸುದ್ದಿ ಕೇಳಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಅವರ ಅಗಲಿಕೆಯಿಂದ ನನಗೆ ತುಂಬಾ ಆಘಾತವಾಗಿದೆ. ವೈಯಕ್ತಿಕವಾಗಿ ನಾನು ಒಬ್ಬ ಮಹಾನ್ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಶ್ರೀಗಳು ಕೇವಲ ಉತ್ತರ ಕರ್ನಾಟಕದವರಲ್ಲ. ಅವರು ಇಡೀ ನಾಡಿನ ಸ್ವಾಮೀಜಿಗಳು. ಅವರು ಮಾಡಿದಂತಹ ಕೆಲಸವನ್ನು ಅವರ ಉತ್ತರಾಧಿಕಾರಿಯಾದ ನಾಗನೂರು ಶ್ರೀಗಳು ಮುಂದುವರಿಸಿಕೊಂಡು ಹೋಗುತ್ತಾರೆ. ಆ ಬಗ್ಗೆ ನಂಬಿಕೆ ನನಗಿದೆ. ನಾಗನೂರಿಗೂ ನನಗೂ ಅವಿನಾಭಾವ ಸಂಬಂಧವಿದೆ. ಏಕೆಂದರೆ ನಾನು ನನ್ನ ಮೊದಲ ಗ್ರಾಮ ವಾಸ್ತವ್ಯ ಮಾಡಿದ್ದು ಸಹ ನಾಗನೂರು ಮಠದಿಂದ. ನಾಗನೂರು ಶ್ರೀಗಳು ಈ ಮಠವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲಿ ಎಂದು ಹಾರೈಸಿದರು.

ಸಿದ್ಧಲಿಂಗ ಶ್ರೀಗಳ ಅಗಲಿಕೆಯಿಂದ ಸಮಾಜಕ್ಕೆ ಆಗಿರುವ ನಷ್ಟಕ್ಕಿಂತ, ನನಗೆ ಹೆಚ್ಚು ನಷ್ಟ ಆಗಿದೆ. ಅವರು 12 ವರ್ಷಗಳ ಹಿಂದೆಯೇ ನನಗೆ ಉತ್ತರ ಕರ್ನಾಟಕ ಬಗ್ಗೆ ಹೆಚ್ಚಿನ ವಿವರವನ್ನು ನೀಡಿದ್ದರು. ಅಲ್ಲದೇ ಶ್ರೀಗಳಿಗೆ ವಿಶೇಷ ಗೌರವ ಸೂಚಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯಕ್ಕೆ ಶ್ರೀಗಳ ಹೆಸರನ್ನು ಇಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು, ಶೀಘ್ರವೇ ವಿಶ್ವವಿದ್ಯಾನಿಲಯಕ್ಕೆ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಗುತ್ತದೆ ಎನ್ನುವ ಘೋಷಣೆಯನ್ನು ಸಹ ಮಾಡಿದರು.

ಲಿಂಗಾಯತ ಧರ್ಮದ ಪ್ರಮುಖ ರೂವಾರಿ, ಸಮಾಜ ಸುಧಾರಕ, ಗದಗಿನ ತೋಂಟದಾರ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶನಿವಾರ ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದರು. ಮಾಜಿ ಪ್ರಧಾನಿ ದೇವೇಗೌಡ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಶ್ರೀಗಳ ಅಂತಿಮ ದರ್ಶನವನ್ನು ಪಡೆದುಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *