ಶಿವಮೊಗ್ಗ: ಇಲ್ಲಿನ ಹಾರನಹಳ್ಳಿಯ ಶ್ರೀರಾಮಲಿಂಗೇಶ್ವರ ಮಠದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಸಲು ಭಕ್ತನೊಬ್ಬ ತಾನೇ ಸ್ವಾಮೀಜಿಯಾಗಿ ಯಾಮಾರಿಸಿ ಶಿವರಾತ್ರಿ ದಿನವೇ ಅಂದರ್ ಆಗಿದ್ದಾನೆ.
Advertisement
ಹಾರನಹಳ್ಳಿ ಸಮೀಪದ ವಿಠಗೊಂಡನಕೊಪ್ಪದ ಶಿವಕುಮಾರ್ ಈಗ ಪೊಲೀಸರ ಅತಿಥಿಯಾಗಿರುವ ವ್ಯಕ್ತಿ. ಶಿವಮೊಗ್ಗ ತಾಲೂಕು ಹಾರನಹಳ್ಳಿಯ ಶ್ರೀರಾಮಲಿಂಗೇಶ್ವರ ಮಠಕ್ಕೆ ಸಾವಿರ ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಮೂಲೆಗಳಲ್ಲಿದೆ. ಈ ಆಸ್ತಿ ಕಬಳಿಸಲು ಹುಟ್ಟಿಕೊಂಡ ಜಾಲವೇ ಶಿವಕುಮಾರನನ್ನು ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿಗಳನ್ನಾಗಿ ಮಾಡಿದೆ.
Advertisement
Advertisement
ಮಠದ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ 2014ರಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ ಶಿವಕುಮಾರ ತನ್ನ ಹೆಸರನ್ನು ಶ್ರೀಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಎಂದು ಬದಲಿಸಿಕೊಂಡು ಇದೇ ಹೆಸರಿನಲ್ಲಿ ಓಟರ್ ಐಡಿಯನ್ನೂ ಪಡೆದಿದ್ದಾನೆ. ಇದರ ಆಧಾರದ ಮೇಲೆ ಹಾರನಹಳ್ಳಿಯಲ್ಲಿ ಒಂದೂವರೆ ಎಕರೆ ಜಮೀನನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾನೆ. ಖಾತೆ ಆಗುವ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದು ಅಸಲಿ ಚಂದ್ರಮೌಳೀಶ್ವರ ಸ್ವಾಮೀಜಿಗಳ ಉತ್ತರಾಧಿಕಾರಿ ಶ್ರೀವಿಶ್ವಾರಾಧ್ಯ ಸ್ವಾಮೀಜಿ ಕುಂಸಿ ಪೊಲೀಸರಿಗೆ ದೂರು ನೀಡಿದ್ದರು.
Advertisement
ಈ ನಕಲಿ ಸ್ವಾಮೀಜಿ ಕುರಿತು ತನಿಖೆ ಆರಂಭಿಸಿದ ಕುಂಸಿ ಪೊಲೀಸರಿಗೆ ಅಚ್ಚರಿ ಕಾದಿತ್ತು. ನೋಡಲು ಸ್ವಲ್ಪ ಹಿರಿಯ ಸ್ವಾಮೀಜಿಗಳ ರೀತಿಯಲ್ಲೇ ಇದ್ದ ಶಿವಕುಮಾರ್, ಆಸ್ತಿ ವ್ಯವಹಾರದ ವೇಳೆ ಚಂದ್ರಮೌಳೇಶ್ವರ ಸ್ವಾಮೀಜಿ ವೇಷ ಧರಿಸಿ ಹೊರಡುತ್ತಿದ್ದ.
2014ರಲ್ಲಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮಠದ ಆಸ್ತಿಯನ್ನು ತಾನೇ ಸ್ವಾಮಿ ಎಂದು ಹೋಗಿ 15 ಕೋಟಿಗೆ ಮಾರಲು ಅಗ್ರಿಮೆಂಟ್ ಮಾಡಿಕೊಂಡು 1.5 ಕೋಟಿ ರೂಪಾಯಿ ಮುಂಗಡವನ್ನೂ ಪಡೆದಿದ್ದ. ಯಲಹಂಕದ ಒಂದು ಆಸ್ತಿ ವಿವಾದ ಬೆಂಗಳೂರಿನ ಎಸಿ ಕೋರ್ಟ್‍ನಲ್ಲಿ ನಡೆಯುತ್ತಿದ್ದು, ಅಲ್ಲಿಗೂ ಈತ ಸ್ವಾಮೀಜಿ ವೇಷ ಧರಿಸಿ ಹೋಗಿದ್ದ ಎಂದು ತಿಳಿದು ಬಂದಿದೆ.
ಈತನ ಹಿಂದೆ ಬೆಂಗಳೂರಿನ ಖ್ಯಾತ ವಕೀಲರೊಬ್ಬರು ಸೇರಿ ನಾಲ್ಕೈದು ಜನರ ತಂಡವೇ ಇದ್ದು, ರಾಜ್ಯದ ನಾನಾ ಭಾಗಗಳಲ್ಲಿ ಹರಡಿರುವ ಮಠದ ಸಾವಿರಾರು ಕೋಟಿ ರೂಪಾಯಿ ಆಸ್ತಿ ಕಬಳಿಸಲು ಮುಂದಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆಯೂ ಹೆಚ್ಚಿನ ತನಿಖೆಯನ್ನು ಕುಂಸಿ ಪೊಲೀಸರು ಕೈಗೊಂಡಿದ್ದಾರೆ.