Thursday, 19th July 2018

ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತ್ಮಹತ್ಯೆ ಶರಣಾದ ಪತಿ!

ಬೆಂಗಳೂರು: ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ವೇಳೆ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ.

ರಾಮಮೂರ್ತಿ ನಗರದ ನಿವಾಸಿ ಹೆನ್ರೀ ಫರ್ನಾಂಡಿಸ್ (35) ಮೃತ ವ್ಯಕ್ತಿಯಾಗಿದ್ದು, ಪತ್ನಿ ಚಿತ್ರಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿತ್ರಾ ಅವರಿಗೆ ಪ್ರಸ್ತುತ ಕೆಆರ್ ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಏನಿದು ಘಟನೆ?: ಪತಿ ಹೆನ್ರೀ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಕಳೆದ ಕೆಲ ತಿಂಗಳಿಂದ ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತಿತ್ತು. ಶುಕ್ರವಾರ ಬೆಳಗ್ಗೆ ಕೆ.ಆರ್.ಪುರ ದೇವಸಂದ್ರದ ಪೋಷಕರ ಮನೆಯಿಂದ ಚಿತ್ರಾರನ್ನು ರಾಮಮೂರ್ತಿನಗರದ ಸೆಂಟ್ ಆನ್ಸ್ ಶಾಲೆ ಬಳಿಯ ಮನೆಗೆ ಕರೆಕೊಂಡು ಬಂದಿದ್ದಾನೆ. ನಂತರ ತಮ್ಮ ಇಬ್ಬರು ಮಕ್ಕಳನ್ನ ಶಾಲೆಗೆ ಕಳುಹಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಹೆನ್ರೀ ತನ್ನ ಪತ್ನಿ ತಲೆ ಹಾಗೂ ಬಲಗೈಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಚಿತ್ರಾ ಮನೆಯಲ್ಲೇ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾರೆ. ಪತ್ನಿ ಸಾವನ್ನಪ್ಪಿದ್ದಾಳೆ ಎಂದು ತಿಳಿದ ಹೆನ್ರೀ ಫೆರ್ನಂದೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶುಕ್ರವಾರ ಸಂಜೆ ವೇಳೆಗೆ ಚಿತ್ರಾ ಅವರ ಸಹೋದರ ಮನೆಗೆ ಕರೆ ಮಾಡಿದ್ದು, ಯಾರೂ ಕರೆಯನ್ನು ಸ್ವೀಕರಿಸಿದ ಕಾರಣ ಅನುಮಾನಗೊಂಡು ಮನೆಗೆ ಬಂದು ನೋಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಕೆ.ಆರ್.ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.

Leave a Reply

Your email address will not be published. Required fields are marked *