ಮೈಸೂರು: ನಾಯಿ ಬೊಗಳಿದರೆ ಜೋರಾಗಿ ಗದರಿಸಿ ಓಡಿಸುವುದನ್ನು ನೋಡಿದ್ದೇವೆ. ಹೆಚ್ಚು ಎಂದರೆ ಕಲ್ಲಲ್ಲಿ ಹೊಡೆದು ಓಡಿಸುವುದನ್ನು ನೋಡಿದ್ದೀರಿ. ಆದರೆ, ನಾಯಿ ಬೊಗಳಿತು ಅಂತಾ ಅದನ್ನು ಹಿಡಿದು ಚಾಕುವಿನಿಂದ ಇರಿಯುವುದನ್ನು ನೋಡಿದ್ದೀರಾ, ಕೇಳಿದ್ದೀರಾ. ಇಂತಹದೊಂದು ವಿಚಿತ್ರ ಪ್ರಕರಣ ಈಗ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಎನ್‍ಆರ್ ಮೊಹಲ್ಲಾದ ನಿವಾಸಿ ಆರೋಕ್ಯಮೇರಿ ಎಂಬವರು ತಮ್ಮ ಮನೆಯಲ್ಲಿ ನಾಯಿ ಸಾಕಿದ್ದಾರೆ. ಮನೆಯ ಮುಂಭಾಗ ಇದ್ದ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ನೆರೆ ಮನೆಯ ನಿವಾಸಿ ಜುಲ್ಫಿಕರ್ ಎಂಬ ವ್ಯಕ್ತಿಯನ್ನು ಕಂಡು ನಾಯಿ ಜೋರಾಗಿ ಬೊಗಳಿದೆ. ಇದರಿಂದ, ಕುಪಿತಗೊಂಡ ಜುಲ್ಫಿಕರ್, ನಾಯಿ ಸಾಕಿದ ಮನೆಯವರಿಗೆ ಬೈದಿದ್ದಾನೆ.
ತಕ್ಷಣ, ಮನೆಯವರು ನಾಯಿಯನ್ನು ಮನೆಯ ಟೆರೇಸ್‍ಗೆ ಕರೆದುಕೊಂಡು ಹೋಗಿ ಜುಲ್ಫಿಕರ್‍ಗೆ ಕ್ಷಮೆ ಕೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಜುಲ್ಫಿಕರ್, ನಂತರ ತನ್ನ ಇಬ್ಬರು ಸ್ನೇಹಿತರ ಜೊತೆ ಬಂದು ಟೆರೇಸ್‍ನಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಹಿಡಿದು ತಲೆ, ಕುತ್ತಿಗೆ ಹಾಗೂ ದವಡೆ ಭಾಗಕ್ಕೆ ಚಾಕುವಿನಿಂದ ಇರಿದು ತನ್ನ ಕೋಪ ತೀರಿಸಿಕೊಂಡಿದ್ದಾನೆ.
ಇದರಿಂದ ಬೇಸರಗೊಂಡ ನಾಯಿ ಮಾಲೀಕ ಆರೋಕ್ಯಮೇರಿ ತನ್ನ ನಾಯಿಗೆ ಚಾಕುವಿನಿಂದ ಇರಿದ ಜುಲ್ಫಿಕರ್ ವಿರುದ್ಧ ಎನ್‍ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.