ಬೆಂಗಳೂರು: ಪಾರ್ಟಿ ಮಾಡುವಾಗ ಕಿರಿಕ್ ಮಾಡಿದ್ದಕ್ಕೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಅನೇಕಲ್ ತಾಲೂಕಿನ ತಟ್ನಹಳ್ಳಿಯ ಕೆರೆಯ ಬಳಿ ಬುಧವಾರ ರಾತ್ರಿ ನಡೆದಿದೆ.
ಅನೇಕಲ್ ತಾಲೂಕಿನ ಅವಡದೆನಹಳ್ಳಿಯ 24 ವರ್ಷದ ಮನೋಜ್ ಕೊಲೆಯಾದ ಯುವಕ. ಯಶವಂತ್ ಎಂಬಾತನ ಚಾಕು ಇರಿದ ಆರೋಪಿ. ಯಶವಂತ್ ಮತ್ತು ಮನೋಜ್ ನಡುವೆ ಈ ಹಿಂದೆಯೂ ಗಲಾಟೆಗಳು ನಡೆದಿದ್ದವು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರೂ ಜಗಳ ಮಾಡಿಕೊಂಡಿದ್ದು ಪರಸ್ಪರ ಒಬ್ಬರಿಗೊಬ್ಬರು ಚಾಕು ಇರಿದುಕೊಂಡಿದ್ದಾರೆ.
ಕೆರೆ ಬಳಿ ನಡೆದಿದ್ದೇನು?: ಯಶಂವಂತ್ ತನ್ನ ಸ್ನೇಹಿತರೊಂದಿಗೆ ಕೆರೆಯಲ್ಲಿ ಪಾರ್ಟಿ ಮಾಡುವ ವೇಳೆ ಮನೋಜ್ ಹಾಗೂ ಆತನ ಕೆಲ ಸ್ನೇಹಿತರು ಕೆರೆಗೆ ಬಂದು ಕಿರಿಕ್ ಮಾಡಿದ್ದಾರೆ. ಈ ವೇಳೆ ಇಬ್ಬರ ಜಗಳ ತಾರಕಕ್ಕೇರಿದ್ದು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಈ ವೇಳೆ ಮನೋಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇನ್ನೂ ಗಲಾಟೆಯಲ್ಲಿ ಗಾಯಗೊಂಡ ಯಶವಂತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾವನ್ನಪ್ಪಿರುವ ಮನೋಜ್ ಈ ಹಿಂದೆ ಯಶವಂತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜೈಲು ಸೇರಿದ್ದನು. ಇತ್ತೀಚಿಗಷ್ಟೇ ಜಾಮೀನು ಪಡೆದಕೊಂಡು ಜೈಲಿನಿಂದ ಹೊರ ಬಂದಿದ್ದನು. ಮನೋಜ್ ಆನೇಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಿಕೊಂಡಿದ್ದನು ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.