ಮಡಿಕೇರಿ: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಗುಂಡೇಟಿಗೆ ಮೂವರು ಬಲಿಯಾಗಿದ್ದ ನೆನಪು ಮಾಸುವ ಮುನ್ನವೇ ಇಂದು ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಬಂದೂಕು ಮತ್ತೆರೆಡು ಜೀವಗಳನ್ನು ಬಲಿ ಪಡೆದುಕೊಂಡಿದೆ.
ಕ್ಷುಲ್ಲಕ ಕಾರಣಕ್ಕೆ ಪಕ್ಕದ ಮನೆ ಮಹಿಳೆಗೆ ಗುಂಡಿಕ್ಕಿ ಹತ್ಯೆ ಮಾಡಿದ ಯುವಕ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದಲ್ಲಿ ನಡೆದಿದೆ.
ಕಾಲೂರು ಗ್ರಾಮದ ನಿವಾಸಿಗಳಾದ ಕಾಶಿ ಧರ್ಮರಾಯ ಹಾಗೂ ಅದೇ ಗ್ರಾಮದ ಕಟ್ಟಿ ಎಂಬವರ ಪತ್ನಿ ಲಲಿತಾ(40) ಮೃತ ದುರ್ದೈವಿಗಳು. ಕ್ಷುಲ್ಲಕ ಕಾರಣಕ್ಕೆ ಕಾಶಿ ಲಲಿತಾ ಅವರಿಗೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.
ಏನಿದು ಘಟನೆ?
ಕಾಶಿ ಧರ್ಮರಾಯ ಎಂದಿನಂತೆ ಇಂದು ತೋಟಕ್ಕೆ ಹೋಗಿ ಬರುವುದಾಗಿ ತನ್ನ ತಾಯಿಯ ಬಳಿ ಹೇಳಿ ಲಲಿತಾ ಎಂಬವರ ಮನೆಗೆ ಬಂದಿದ್ದ. ಬಂದವನೇ ಕ್ಷುಲ್ಲಕ ಕಾರಣಕ್ಕೆ ಲಲಿತಾ ಅವರಿಗೆ ಗುಂಡಿಕ್ಕಿ ಕೊಲೆಗೈದು, ತಾನೂ ಗುಂಡು ಹೊಡೆದು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ. ಘಟನೆ ವೇಳೆ ಲಲಿತಾ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಧರ್ಮರಾಯನ ಮುಖ ಗುಂಡೇಟಿಗೆ ಛಿದ್ರವಾಗಿತ್ತು. ಕೂಡಲೇ ಧರ್ಮರಾಯನನ್ನು ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಲಲಿತಾ ಹಾಗೂ ಧರ್ಮರಾಯ ಅಕ್ಕ-ಪಕ್ಕದ ಮನೆಯವರು. ಹಲವು ವರ್ಷಗಳಿಂದ ಪರಿಚಯಸ್ಥರು. ಎರಡೂ ಮನೆಯವರು ಒಬ್ಬರಿಗೊಬ್ಬರು ಕಷ್ಟಕ್ಕೆ ಆಗುತ್ತಿದ್ದರು. ಆದರೆ ಧರ್ಮರಾಯ ಹಾಗೂ ಲಲಿತಾ ನಡುವೆ ಕೊಂಚ ಹೆಚ್ಚಿನ ಒಡನಾಟ ಇತ್ತು ಎನ್ನಲಾಗಿದೆ. ದೂರ ಇರುವಂತೆ ಧರ್ಮರಾಯನಿಗೆ ತಾಯಿ ಕಾಮವ್ವ ಸಾಕಷ್ಟು ಬಾರಿ ಬುದ್ಧಿವಾದವನ್ನೂ ಹೇಳಿದ್ದರು. ಆದರೆ ಇಂದು ಯಾವ ಕಾರಣಕ್ಕೆ ಇಬ್ಬರ ನಡುವೆ ಕಲಹ ನಡೆದಿದೆ ಎಂಬುವುದು ತಿಳಿದು ಬಂದಿಲ್ಲ. ಪ್ರಸ್ತುತ ಇಬ್ಬರನ್ನೂ ಕಳೆದುಕೊಂಡಿರುವ ಎರಡೂ ಮನೆಯ ಕುಟುಂಬಸ್ಥರು ಘಟನೆಯಿಂದ ಕಂಗಾಲಾಗಿದ್ದಾರೆ. ಇನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಂತಪ್ರಿಯ ಜಿಲ್ಲೆಯಾಗಿದ್ದ ಕೊಡಗು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಂದೂಕಿನಿಂದಲೇ ಸುದ್ದಿಯಾಗುತ್ತಿದ್ದು, ಗುಂಡೇಟಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಿದೆ.