ಮಂಡ್ಯ: ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ಜರುಗಿದೆ.
ಕೆಆರ್ ಪೇಟೆ ತಾಲೂಕಿನ ಹನುಮನಹಳ್ಳಿ ಗ್ರಾಮದ ಕುಮಾರ್ ಎಂಬವನ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಗುರುವಾರ ರಾತ್ರಿ ಕುಮಾರ್ ಕೆಆರ್ ಪೇಟೆ ಪಟ್ಟಣದ ಕನ್ನಿಕ ಮೆಡಿಕಲ್ ಬಳಿ ನಿಂತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ಬಂದು ಹಲ್ಲೆಗೈದು ಪರಾರಿಯಾಗಿದ್ದಾರೆ.
ನಂತರ ಹಲ್ಲೆಯಿಂದ ತೀವ್ರವಾಗಿ ಕುಮಾರ್ ನನ್ನು ಸ್ನೇಹಿತರು ಹಾಗೂ ಸ್ಥಳೀಯರು ಕೆಆರ್ ಪೇಟೆ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಸದ್ಯ ಕೆಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಸೆರೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.