ಶಿವಮೊಗ್ಗ: ಹೆಂಡತಿಯನ್ನು ಕೊಂದ ಪಾಪಿ ತಂದೆಯೊಬ್ಬ ಸುಮಾರು 3 ವರ್ಷದ ಮಗುವನ್ನು ಶವದ ಬಳಿಯೇ ಬಿಟ್ಟು ಪರಾರಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಜಿಲ್ಲೆಯ ಮಲವಗೊಪ್ಪ ಬಳಿ ಬಿ.ಹೆಚ್.ರಸ್ತೆಯಲ್ಲಿ ತಾಯಿಯನ್ನು ಕೊಂದು ರಸ್ತೆ ಬದಿಯ ಹೊಲದಲ್ಲಿ ಹಾಕಲಾಗಿತ್ತು. ಕೊಲೆ ಆಗಿದೆ ಎಂಬುದನ್ನೂ ಅರಿಯದ ಪುಟ್ಟ ಮಗು ರಾತ್ರಿಯಿಡೀ ಶವದ ಬಳಿಯೇ ಇತ್ತು. ಮುಂಜಾನೆ ಶವದ ಪಕ್ಕ ಸೊಳ್ಳೆ- ನೋಣ ಓಡಿಸುತ್ತಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಲೆಯಾಗಿರುವ ಮಹಿಳೆಗೆ ಸುಮಾರು 25 ವರ್ಷವಾಗಿದೆ. ಇವರ ಬಗ್ಗೆ ಹಾಗೂ ಈ ಕೃತ್ಯವೆಸಗಿರುವ ವ್ಯಕ್ತಿ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ದೊರಕಿಲ್ಲ.
ಮಗು ಮಾತ್ರ ತನ್ನ ಅಪ್ಪನೇ ಅಮ್ಮನಿಗೆ ಹೊಡೆದ ಎಂದು ಹೇಳುತ್ತಿದೆ. ಕೊಲೆಗೀಡಾದ ಮಹಿಳೆಯ ಕೈ ಮೇಲೆ ಯಲ್ಲಮ್ಮ- ನಾಗರಾಜ್ ಎಂಬ ಹಚ್ಚೆ ಬರಹ ಇದೆ. ಮಗುವಿನ ಹೇಳಿಕೆ ಹಾಗೂ ಈ ಹಚ್ಚೆಯ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗಗೆ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.