ಬೆಂಗಳೂರು: ಅಣ್ಣನ ಮದ್ವೆ ಇಂದು ಆಗ್ಬೇಕಿತ್ತು. ಆದ್ರೆ ಅತ್ತ ತಮ್ಮನ ಹೆಣ ಬಿದ್ದಿದೆ. ಮದುವೆ ಖುಷಿಯಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ನಗುನಗುತ್ತಾ ಓಡಾಡ್ತಿರಬೇಕಿದ್ದ ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟಿದೆ.
ಹೌದು. ಗುರುವಾರ ರಾತ್ರಿ ಬೆಂಗಳೂರಿನ ಡಿಜೆ ಹಳ್ಳಿಯ ಉಮರ್ ಫಾರುಕ್ ಮಸ್ಜೀದ್ ಬಳಿ 22 ವರ್ಷದ ಶೇಖ್ ರಿಜ್ವಾನ್ ಅನ್ನೋ ಯುವಕನನ್ನು ದುಷ್ಕರ್ಮಿಗಳು ಡ್ರ್ಯಾಗರ್‍ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಶಾಹಿದ್, ಚೆನ್ನೈ ಶಾಹಿದ್ ಹಾಗೂ ಇನ್ನೊಬ್ಬ ಅಪರಿಚಿತ ಸೇರಿ ಮೂವರಿಂದ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇಂದು ರಿಜ್ವಾನ್ ಅಣ್ಣ ಇರ್ಫಾನ್ ಮದುವೆ ನಿಗದಿಯಾಗಿತ್ತು. ಹೀಗಾಗಿ ನಿನ್ನೆ ರಾತ್ರಿ ಮೆಹೆಂದಿ ಕಾರ್ಯಕ್ರಮವಿತ್ತು. ಅಂತೆಯೇ ಮನೆ ಮಂದಿಯೆಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಂದ ಚೋಟ ಶಾಹಿದ್ ಅತನ ಸಹಚರರು ಮಾತುಕತೆಯ ನೆಪದಲ್ಲಿ ಮಸೀದಿ ಬಳಿ ಕರೆದುಕೊಂಡು ಹೋಗಿ ಡ್ರ್ಯಾಗರ್‍ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ತಕ್ಷಣವೇ ರಿಜ್ವಾನನ್ನು ನಗರದ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣಕ್ಕೆ ಬೋರಿಂಗ್ ಆಸ್ಪತ್ರೆಗೆ ಸಾಗಿಸಲು ವೈದ್ಯರು ಸೂಚಿಸಿದ್ದರು. ಅಂತೆಯೇ ಬೌರಿಂಗ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಸದ್ಯ ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿರುವ ಡಿಜೆ ಹಳ್ಳಿ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.