ಸ್ನೇಹಿತನ ಮನೆಗೆ ಬಂದು ಎಣ್ಣೆಪಾರ್ಟಿ ಮಾಡಿ ಬೆಳಗಾಗೋವಷ್ಟರಲ್ಲಿ ಹೆಣವುರುಳಿಸಿ ಎಸ್ಕೇಪ್!

Public TV
1 Min Read
murder

ಬೆಂಗಳೂರು: ಪತಿ-ಪತ್ನಿ ಇದ್ದ ಮನೆಗೆ ಸೋಮವಾರ ಸ್ನೇಹಿತರು ಮನೆಗೆ ಬಂದು ಎಣ್ಣೆಪಾರ್ಟಿ ಮಾಡಿ ಮಲಗಿ ಬೆಳಗಾಗೋವಷ್ಟರಲ್ಲಿ ಹೆಣವುರುಳಿಸಿ, ಎಸ್ಕೇಪ್ ಆದ ಪ್ರಕರಣವೊಂದು ಬೆಂಗಳೂರಿನ ಬಂಡೇಪಾಳ್ಯದ ಬಳಿಯಿರುವ ಐಟಿಐ ಲೇಔಟ್‍ನಲ್ಲಿ ನಡೆದಿದೆ.

ಯಶವಂತ್(28) ಕೊಲೆಯಾದ ಯುವಕ. ಮಂಡ್ಯ ಮೂಲದ ಯಶವಂತ್ ಮನೆಗೆ ತನ್ನ ಸ್ನೇಹಿತ ಸುನೀಲ್ ಸೋಮವಾರ ತಡರಾತ್ರಿ ಊಟಕ್ಕೆಂದು ಬಂದಿದ್ದ. ಇದೇ ವೇಳೆ ಸುನೀಲ್‍ನ ಸ್ನೇಹಿತ ಸ್ವಾಮಿ ಕೂಡ ಬಂದಿದ್ದನು.

ಊಟಕ್ಕೆ ಕೂತಿದ್ದ ಯಶವಂತ್ ಹಾಗೂ ಸ್ವಾಮಿ ನಡುವೆ ಸಣ್ಣದೊಂದು ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಸ್ವಾಮಿ ಮನೆಯಲ್ಲೇ ಇದ್ದ ಚಾಕುವಿನಿಂದ ಯಶವಂತನ ಕತ್ತಿನ ಭಾಗಕ್ಕೆ ಇರಿದು ಪರಾರಿಯಾಗಲು ಮುಂದಾಗಿದ್ದ. ಸ್ವಾಮಿಯನ್ನು ತಡೆಯೋಕೆ ಬಂದ ಸುನೀಲ್‍ಗೂ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಯಶವಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

murder 2

ಈ ಮನೆಯಲ್ಲಿ ಐದಾರು ಹೆಣ್ಣು ಮಕ್ಕಳಿದ್ದರು. ಆಗಾಗ ಸುನೀಲ್ ಈ ಮನೆಗೆ ಬಂದು ಪಾರ್ಟಿ ಮಾಡುತ್ತಿದ್ದ. ಹೀಗೆ ವಾರಕ್ಕೋ ಹದಿನೈದು ದಿನಕ್ಕೊಮ್ಮೆ ಸುನೀಲ್‍ನ ಜೊತೆ ಹತ್ತಾರು ಮಂದಿ ಯುವಕರೂ ಈ ಮನೆಯಲ್ಲೇ ಠಿಕಾಣಿ ಹೂಡುತ್ತಿದ್ದರು. ಅದೇ ರೀತಿ ಸೋಮವಾರ ಕೂಡ ಯಶವಂತ್ ಹಾಗೂ ಸ್ವಾಮಿ ಸುನೀಲ್‍ನ ಜೊತೆ ಬಂದಿದ್ದರು. ಹೀಗೆ ಬಂದವರು ಹುಡುಗಿಯರ ವಿಚಾರಕ್ಕೆ ತಗಾದೆ ತೆಗ್ದು ಸ್ವಾಮಿ, ಯಶವಂತ್ ನನ್ನು ಕೊಲೆ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿ ರಮೇಶ್ ಹೇಳಿದ್ದಾರೆ.

murder 3

ಈ ಭಾಗದಲ್ಲಿ ವೇಶ್ಯಾವಾಟಿಕೆ ಅಡ್ಡೆಗಳು ಪೊಲೀಸರ ಗಮನಕ್ಕೆ ಬಾರದಂತೆ ನಡೀತಿದೆ. ಲೇಡಿಸ್ ಬಾರ್ ನಲ್ಲಿ ಕೆಲಸ ಮಾಡುವ ಯುವತಿಯರು ಇಲ್ಲೇ ವಾಸ್ತವ್ಯವಿದ್ದು ಬೆಳಗ್ಗೆಯಾಯ್ತು ಅಂದರೆ ವೇಶ್ಯಾವಾಟಿಕೆ ಶುರು ಹಚ್ಚಿಕೊಳ್ಳುತ್ತಾರೆ. ಇದೇ ಕಾರಣದಿಂದ ಕೊಲೆ ನಡೆದಿರಬಹುದೆಂದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇತ್ತೀಚೆಗೆ ಯುವತಿಯರನ್ನು ಬಲವಂತವಾಗಿ ವೇಶ್ಯಾವಾಟಿಕೆ ತಳ್ಳಿ ಕಾಸು ಮಾಡಲು ಕೆಲ ವ್ಯಕ್ತಿಗಳು ಮುಂದಾಗುತ್ತಿದ್ದಾರೆ. ಇದರಿಂದ ಕೊಲೆ, ಸುಲಿಗೆಯಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಶುರುವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು ಇಂತಹ ವೇಶ್ಯಾವಾಟಿಕೆ ಮಧ್ಯವರ್ತಿಗಳನ್ನ ಹೆಡೆಮುರಿ ಕಟ್ಟಿದರೆ ಖಂಡಿತಾ ಮುಂದಾಗುವ ಅಪರಾಧವನ್ನು ತಡೆಯಬಹುದಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article