Districts
ಎರಡು ಬೈಕ್ ಮುಖಾಮುಖಿ ಡಿಕ್ಕಿ- ಸ್ಥಳದಲ್ಲಿಯೇ ಓರ್ವ ಸಾವು

ರಾಯಚೂರು: ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸವಾರರೊಬ್ಬರು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಉಪ್ರಾಳ ಗ್ರಾಮದ ಬಳಿ ನಡೆದಿದೆ.
ಉಪ್ರಾಳ ಗ್ರಾಮದ ನಿವಾಸಿ 33 ವರ್ಷದ ಸುಧಾಕರ್ ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಅಪಘಾತದಲ್ಲಿ ಮತ್ತಿಬ್ಬರಿಗೆ ತೀವ್ರವಾಗಿ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಧಾಕರ್ ಬೈಕಿನಲ್ಲಿ ಗುಂಜಳ್ಳಿಯಿಂದ ಉಪ್ರಾಳ ಗ್ರಾಮಕ್ಕೆ ಮರಳುತ್ತಿದ್ದರು. ಇದೇ ಸಂದರ್ಭದಲ್ಲಿ ರಸ್ತೆಯ ಒಂದು ತಿರುವಿನಲ್ಲಿ ಇನ್ನೊಂದು ಬೈಕ್ ಅತೀ ವೇಗದಲ್ಲಿ ಬಂದು ನಿಯಂತ್ರಣ ತಪ್ಪಿ ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಪರಿಣಾಮ ಸ್ಥಳದಲ್ಲಿಯೇ ಸುಧಾಕರ್ ತನ್ನ ಗ್ರಾಮದ ಬಳಿಯೇ ಸಾವನ್ನಪ್ಪಿದ್ದಾರೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
