ಹಾಸನ: ಅಪರಿಚಿತ ವ್ಯಕ್ತಿಯೊಬ್ಬರು ಬಸ್‍ಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದ್ದು ಘಟನೆ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆ ಸೋಮವಾರ ಬೆಳಗ್ಗೆ ಸುಮಾರು 6.30ರ ವೇಳೆಗೆ ಹಾಸನ ನಗರದ ನೂತನ ಬಸ್ ನಿಲ್ದಾಣದ ಬಳಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಸ್ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದ್ರೆ ಈ ಬಗ್ಗೆ ಸಿಸಿಟಿವಿ ಪರಿಶೀಲಿಸಿದಾಗ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
Advertisement
Advertisement
ಕೆಎಸ್ ಆರ್ ಟಿಸಿ ಬಸ್ ಮಂತ್ರಾಲಯದಿಂದ ಹಾಸನಕ್ಕೆ ಬಂದು ಶಿವಮೊಗ್ಗ ಕಡೆ ಹೋಗಲು ಬಸ್ ನಿಲ್ದಾಣದಿಂದ ಹೊರಟು ಸಮೀಪದ ರೈಲ್ವೆ ಗೇಟ್ ದಾಟಿತ್ತು. ಇದೇ ವೇಳೆ ಸುಮಾರು 40-45ರ ವಯಸ್ಸಿನ ಅಪರಿಚಿತ ವ್ಯಕ್ತಿ ರಸ್ತೆ ಬದಿ ನಿಂತಿದ್ದರು. ತನ್ನ ಮುಂದೆಯೇ ಬಸ್ ಸಾಗಿದ್ದು, ನೋಡನೋಡ್ತಿದ್ದಂತೆ ಹಿಂಭಾಗದ ಚಕ್ರಕ್ಕೆ ತಲೆ ಕೊಟ್ಟಿದ್ದಾರೆ.
Advertisement
ತಲೆಯ ಮೇಲೆಯೇ ಬಸ್ ಚಕ್ರ ಹರಿದಿರುವುದರಿಂದ ಸ್ಥಳದಲ್ಲಿಯೇ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ಯಾರು ಎಂಬುದು ಪತ್ತೆಯಾಗಿಲ್ಲ. ಹಾಗೆ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನಷ್ಟೆ ತಿಳಿದುಬರಬೇಕಿದೆ. ಸದ್ಯ ವ್ಯಕ್ತಿಯ ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿದೆ.
Advertisement
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಮತ್ತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.