ಹಾಸನ: ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಆತಂಕ ಸೃಷ್ಟಿಸಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.
ಅಪರಿಚಿತ ವ್ಯಕ್ತಿ ಬೆಳಗ್ಗೆ 10.30ಕ್ಕೆ ಮೊಬೈಲ್ ಟವರ್ ಏರಿದ್ದನು. ಸ್ಥಳದಲ್ಲಿ ಸಾರ್ವಜನಿಕರು, ಪೊಲೀಸರು ಇದ್ದರು ಸಹ ಇದ್ದು ಅಸಹಾಯಕರಾಗಿ ನೋಡುವಂತಾಗಿತ್ತು. ಟವರ್ ನ ತುದಿಯಲ್ಲಿ ಕುಳಿತಿರುವ ಅಪರಿಚಿತ ಏನನ್ನೋ ಹೇಳುತ್ತಿದ್ದು, ಅದು ಕೆಳಗಿರುವವರಿಗೆ ಕೇಳಿಸುತ್ತಿಲ್ಲ. ಆದರೆ ಆ ವ್ಯಕ್ತಿ ಕೆಲವರ ಮೊಬೈಲ್ ನಂಬರ್ ಬರೆದು ಮೇಲಿಂದ ಹಾಕುತ್ತಿದ್ದನು.
ಅಷ್ಟೇ ಅಲ್ಲದೇ ಆ ವ್ಯಕ್ತಿಯ ಸ್ಪಷ್ಟವಾದ ಮುಖದ ಚಹರೆ ಕೂಡ ಕಾಣುತ್ತಿರಲಿಲ್ಲ. ಆದರೆ ಪೊಲೀಸರು ಕೆಳಗೆ ಇಳಿಯುವಂತೆ ಮನವಿ ಮಾಡುತ್ತಿದ್ದರು. ನಂತರ ಘಟನೆ ಬಗ್ಗೆ ಮಾಹಿತಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಟವರ್ ಮೇಲೇರಿ ಮನವೊಲಿಸಿ ಆತನನ್ನು ಕೆಳಗೆ ಇಳಿಸಿದ್ದಾರೆ.
ವ್ಯಕ್ತಿ ಕಲಬುರಗಿ ಮೂಲದ ದನದ ವ್ಯಾಪಾರಿಯಾಗಿದ್ದು, ವ್ಯಾಪಾರದಲ್ಲಿ ಮೋಸ ಆಗಿದ್ದಕ್ಕೆ ಮನನೊಂದು ಟವರ್ ಮೇಲೆಹತ್ತಿದ್ದ ಎಂದು ತಿಳಿದು ಬಂದಿದೆ.