ಮಂಗಳೂರು: ಚೀನಾದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಇದೆ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ.
ಚೀನಾ ದೇಶಕ್ಕೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ವ್ಯಕ್ತಿಯೊಬ್ಬರು ಎರಡು ದಿನಗಳ ಹಿಂದೆ ತಾಯ್ನಾಡಿಗೆ ಮರಳಿದ್ದಾರೆ. ವ್ಯಕ್ತಿ ಇಲ್ಲಿಗೆ ಬಂದಾಗ ಅವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಯಿತು.
ತಪಾಸಣೆಗೆ ಒಳಪಡಿಸಿದಾಗ ವ್ಯಕ್ತಿಯ ದೇಹದಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದಿಲ್ಲ. ಹಾಗಾಗಿ ವ್ಯಕ್ತಿಯನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ ಅವರ ಮನೆಯ ಪರಿಸರದಲ್ಲಿ ಕೆಲವರು ಆತಂಕ ವ್ಯಕ್ತಪಡಿಸಿದ್ದರಿಂದ ವ್ಯಕ್ತಿ ಬುಧವಾರ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಮತ್ತೆ ಆರೋಗ್ಯ ತಪಾಸಣೆ ನಡೆಸಿ ಮನೆಗೆ ಹಿಂತಿರುಗಿದ್ದಾರೆ.
ಚೀನಾದಿಂದ ಆಗಮಿಸಿದ ವ್ಯಕ್ತಿ ಕಡಬಕ್ಕೆ ಆಗಮಿಸಿದ್ದು, ಸ್ಥಳೀಯರು ತಿಳಿಸಿದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತಪಾಸಣೆ ನಡೆಸಲಾಗಿದ್ದು, ಕೊರೊನಾ ವೈರಸ್ ಲಕ್ಷಣಗಳು ಕಂಡು ಬಾರದ ಹಿನ್ನೆಲೆಯಲ್ಲಿ ಕಳುಹಿಸಿಕೊಡಲಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ ತಿಳಿಸಿದ್ದಾರೆ.