– ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾಗದ ಕುಡುಕ
ಬೆಂಗಳೂರು: ಕುಡುಕನೊಬ್ಬ ಕುಡಿದ ಮತ್ತಿನಲ್ಲಿ ರಾಜಕಾಲುವೆಗೆ ಬಿದ್ದು ರಂಪಾಟ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಲಾಲ್‍ಬಾಗ್ ರೋಡ್ ರಾಜಕಾಲುವೆಯಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ಸುಮಾರು 10 ಗಂಟೆಗೆ ರಾಜಕಾಲುವೆ ಬಿದ್ದಿದ್ದಾನೆ. ಬೃಹತ್ ರಾಜಕಾಲುವೆ ಇದಾಗಿದ್ದು, ಲಾಲ್‍ಬಾಗ್ ನಿಂದ ಸಂಪಗಿ ರಾಮ ನಗರದ ಕಡೆ ಸಾಗುವ ರಾಜಕಾಲುವೆ ಇದಾಗಿದೆ.
ಕುಡುಕ ರಾಜಕಾಲುವೆ ಬಿದ್ದ ತಕ್ಷಣವೇ ಸ್ಥಳೀಯ ಯುವಕರು ಆತನನ್ನು ಮೇಲಕ್ಕೆತ್ತಿ ಟೀ ಮತ್ತು ಬನ್ ಕೊಟ್ಟು ಮನೆಗೆ ಹೋಗು ಎಂದು ಬುದ್ಧಿ ಹೇಳಿದ್ದಾರೆ. ಆದರೆ ಆತ ನಾನು ಮನೆಗೆ ಹೋಗಲ್ಲ, ಮೇಲಕ್ಕೆ ಬಂದರೆ ಚಳಿಯಾಗುತ್ತೆ ಎಂದು ಮತ್ತೆ ರಾಜಕಾಲುವೆಗೆ ಬಿದ್ದಿದ್ದಾನೆ. ರಾಜಕಾಲುವೆಯ ಕೆಳಗೆ ಅಡಗಿ ಕುಳಿತಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಎಸ್‍ಜೆ ಪಾರ್ಕ್ ಪೊಲೀಸರು ಭೇಟಿ ನೀಡಿ ಶೋಧ ಕಾರ್ಯ ಮಾಡಿದ್ದಾರೆ.
ಶೋಧಕಾರ್ಯ ವೇಳೆಯೂ ಕುಡುಕ ರಾಜಕಾಲುವೆ ಒಳಗಡೆ ಪತ್ತೆಯಾಗಿಲ್ಲ. ರಾಜಕಾಲುವೆ ಒಳಗಡೆ 100 ಮೀಟರ್ ದೂರ ಸಾಗಿದ್ದಾನೆ ಎನ್ನಲಾಗುತ್ತಿದೆ. ಎಷ್ಟೇ ಶೋಧ ಕಾರ್ಯ ಮಾಡಿದರೂ ಕುಡುಕ ಪತ್ತೆಯಾಗಿಲ್ಲ. ರಾಜಕಾಲುವೆ ಮೂಲಕ ಬೇರೆಡೆಗೆ ಸಾಗಿದ್ದಾನೆ ಎನ್ನಲಾಗುತ್ತಿದ್ದು, ಸದ್ಯಕ್ಕೆ ಶೋಧ ಕಾರ್ಯಾಚರಣೆ ಮುಕ್ತಾಯ ಮಾಡಲಾಗಿದೆ. ಕುಡುಕ ಕುಡಿದ ಮತ್ತಲ್ಲಿ ರಾಜಕಾಲುವೆಯಲ್ಲಿ ಎಲ್ಲಿಗೆ ಹೋದ ಅನ್ನುವುದು ಯಕ್ಷ ಪ್ರಶ್ನೆಯಾಗಿದೆ.