ಚಾಮರಾಜನಗರ: ವ್ಯಕ್ತಿಯೊಬ್ಬ ಐಎಎಸ್ ಅಧಿಕಾರಿಗಳ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ಅಧಿಕಾರಿಗಳನ್ನು ಯಾಮಾರಿಸಿದ ಪ್ರಕರಣವೊಂದು ಚಾಮರಾಜನಗರ ಜಿಲ್ಲೆ ಯಳಂದೂರುನಲ್ಲಿ ಬೆಳಕಿಗೆ ಬಂದಿದೆ.
ಸುರೇಶ್ ಅಧಿಕಾರಿಗಳನ್ನು ಯಾಮಾರಿಸಿದ ವ್ಯಕ್ತಿ. ಸುರೇಶ್ ಮೂಲತಃ ಮೈಸೂರಿನ ಸಿದ್ದಲಿಂಗಪುರದವನಾಗಿದ್ದು, ಐಎಎಸ್ ಅಧಿಕಾರಿಗಳಾದ ಅಂಜುಂ ಪರ್ವೇಜ್ ಹಾಗು ಲಕ್ಷ್ಮಿನಾರಾಯಣ ಹೆಸರಿನಲ್ಲಿ ಕರೆ ಮಾಡಿ ಒಂದಲ್ಲ, ಎರಡಲ್ಲ ಮೂರ್ನಾಲ್ಕು ಬಾರಿ ಯಾಮಾರಿಸಿ ರಾಜಾತಿಥ್ಯ ಪಡೆದಿದ್ದಾನೆ.
ಸುರೇಶ್ ಚಾಮರಾಜನಗರ ಜಿಲ್ಲೆ ಯಳಂದೂರು ತಹಶೀಲ್ದಾರ್ ವರ್ಷಾ ಒಡೆಯರ್‍ಗೆ ಕರೆ ಮಾಡಿ, “ನಮ್ಮ ಕಡೆಯವರು ಬಿಳಿಗಿರಿರಂಗನ ಬೆಟ್ಟಕ್ಕೆ ಬರುತ್ತಾರೆ. ಅವರಿಗೆ ದೇವರ ದರ್ಶನ, ಊಟ ವಸತಿ ವ್ಯವಸ್ಥೆ ಕಲ್ಪಿಸಿ” ಎಂದು ಹೇಳಿದ್ದಾನೆ. ಕರೆ ನಂಬಿದ ಅಧಿಕಾರಿಗಳು ರಾಜಾತಿಥ್ಯ ನೀಡಿ ಮೋಸ ಹೋಗಿದ್ದಾರೆ.
ಕೊನೆಗೆ ಅನುಮಾನ ಬಂದು ಕಂದಾಯ ಅಧಿಕಾರಿಗಳು ತಂಡ ರಚನೆ ಮಾಡಿ ಆತನನ್ನು ಯಳಂದೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಕೇವಲ ಎನ್‍ಸಿಆರ್(ನಾನ್ ಕಾಗ್ನಿಸೆಬಲ್ ರಿಪೋರ್ಟ್) ದಾಖಲಿಸಿಕೊಂಡು ಆರೋಪಿಯನ್ನು ಬಿಡುಗಡೆ ಮಾಡಿ ಕಳುಹಿಸಿದ್ದಾರೆ. ಐಎಎಸ್ ಅಧಿಕಾರಿಗಳ ಹೆಸರನ್ನು ದುರುಪಯೋಗಿಸಿಕೊಂಡಿದ್ದರೂ ಪೊಲೀಸರು ಮಾತ್ರ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv