ಬೆಂಗಳೂರು: ದುಷ್ಕರ್ಮಿಗಳು ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಹೋಗಿ ಗುಂಡಿನ ದಾಳಿ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲ ಗ್ರಾಮದಲ್ಲಿ ನಡೆದಿದೆ.
ಕೃಷಿ ಹಾಗೂ ಹಣಕಾಸು ವ್ಯವಹಾರ ಮಾಡಿಕೊಂಡಿದ್ದ ಮುದ್ದುಕೃಷ್ಣ (41) ಗುಂಡಿನ ದಾಳಿಗೆ ಬಲಿಯಾದ ಮೃತ ದುರ್ದೈವಿ.
ಮುದ್ದುಕೃಷ್ಣ ಶುಕ್ರವಾರ ಸಂಜೆ ದೊಡ್ಡ ಬೆಳವಂಗಲದಿಂದ ಚಿಕ್ಕ ಬೆಳವಂಗಲ ಗ್ರಾಮಕ್ಕೆ ಬರುತ್ತಿದ್ದು, ಈ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಕಾರಿನಲ್ಲಿ ಅವರನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ. ನಂತರ ಏಕಾಏಕಿ ಶೂಟೌಟ್ ಮಾಡಿ ಪರಾರಿಯಾಗಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಇನ್ನು ಘಟನೆ ನಡೆದ ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
ಕೃಷಿ ಹಾಗೂ ಹಣಕಾಸು ವ್ಯವಹಾರ ಮಾಡುತ್ತಿದ್ದುದ್ದರಿಂದ ಹಣಕಾಸು ವಿಚಾರಕ್ಕೆ ಕೊಲೆ ನಡೆದಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮುದ್ದುಕೃಷ್ಣನ ಹತ್ಯೆಯಿಂದ ಸಂಬಂಧಿಕರು ಮತ್ತು ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.