ಶಿವಮೊಗ್ಗ: ಸೋಮವಾರ ರಾತ್ರಿ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ.
32 ವರ್ಷದ ಆಸೀಫ್ ಹಲ್ಲೆಗೊಳಗಾದ ಗ್ರಾ.ಪಂ. ಸದಸ್ಯ. ಸೋಮವಾರ ರಾತ್ರಿ ಗವಟೂರಿನಲ್ಲಿರುವ ತಮ್ಮ ಮನೆಗೆ ಹೋಗುವಾಗ ಎರಡು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ತೀವ್ರವಾಗಿ ಥಳಿಸಿ ಪರಾರಿ ಆಗಿದ್ದಾರೆ. ಗಾಯಗೊಂಡಿದ್ದ ಆಸೀಫ್ ನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಆಸೀಫ್ ಒಂದು ತಿಂಗಳ ಹಿಂದೆ ದಲಿತ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಜೈಲಿಗೆ ಹೋಗಿದ್ದನು. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡು ಹೊರ ಬಂದಿದ್ದ. ಇದೇ ಕಾರಣದಿಂದ ಹಲ್ಲೆ ನಡೆದಿರಬಹದು ಎನ್ನುವ ಶಂಕೆ ವ್ಯಕ್ತಪಡಿಸಲಾಗಿದೆ.
ಘಟನೆ ಸಂಬಂಧ ಪೊಲೀಸರು ಯರೇಹಳ್ಳಿ ಗ್ರಾಮದ ಮಂಜು, ಪವನ್, ಕಿರಣ್ ಮತ್ತು ದೀಪಕ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಯಾಗಿರುವ ದೇವರಾಜ್ ಎಂಬಾತ ನಾಪತ್ತೆಯಾಗಿದ್ದಾನೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.