ಬೆಂಗಳೂರು: ಗಣಿ ಕೇಸ್‌ನಲ್ಲಿ ಕುಮಾರಸ್ವಾಮಿ (Kumaraswamy) ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರುವುದು ರಾಜಕೀಯ ದ್ವೇಷಕ್ಕೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ಈ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಹಿಂದೆ ರಾಜ್ಯದಲ್ಲಿ ದ್ವೇಷದ ರಾಜಕೀಯವು ಒಂದು ಗ್ರಾಫ್‌ನಲ್ಲಿ ಇತ್ತು. ಈ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅ ಗ್ರಾಫ್‌ಗೆ ಲಿಮಿಟ್ ಮೀರಿದೆ. ದ್ವೇಷದ ರಾಜಕೀಯಕ್ಕೆ ಈ ಕಾಂಗ್ರೆಸ್ ಸರ್ಕಾರ ಬಿತ್ತನೆ ಬೀಜ ಬಿತ್ತಿದೆ. ಕಾಂಗ್ರೆಸ್‌ಗೆ ಕುಮಾರಸ್ವಾಮಿ ಅವರನ್ನ ಕಂಡರೆ ಭಯ. ಕುಮಾರಸ್ವಾಮಿ ಅವರು ಎಲ್ಲಿ ಈ ಸರ್ಕಾರದ ಭ್ರಷ್ಟ ಹಗರಣ ಬಯಲಿಗೆಳೆಯುತ್ತಾರೆ ಅನ್ನೋ ಭಯ ಇದೆ ಗುಡುಗಿದರು. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ‘ದೇಶೀಯ ಕಾರ್ಗೋ ಟರ್ಮಿನಲ್’ ಪ್ರಾರಂಭ
ಅವರ ವರ್ಚಸ್ಸು ಕುಗ್ಗಿಸಬೇಕು ಅಂತ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಅವರ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಅವರು ರಾಜಕೀಯ ಅಟ್ಯಾಕ್ ಮಾಡಿದರೂ ಅದನ್ನು ಎದುರಿಸುವ ಸಾಮರ್ಥ್ಯ ನಮಗೆ ಇದೆ. ಕುಮಾರಸ್ವಾಮಿ ಅವರು ನೈತಿಕತೆಯಿಂದ ಸರಿಯಾಗಿದ್ದಾರೆ. ಕಾನೂನಾತ್ಮಕವಾಗಿ ನಮ್ಮ ಹೋರಾಟ ನಾವು ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಿಕ್ಕಮಗಳೂರು | 2021ರ ಪರಿಷತ್ ಚುನಾವಣೆ – ಫೆ.28ಕ್ಕೆ ಮರು ಮತ ಎಣಿಕೆ
ಕೇತಗಾನಹಳ್ಳಿ ಜಮೀನು ಸರ್ವೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್‌ನ ಕುತಂತ್ರ. ಕುಮಾರಸ್ವಾಮಿ ಅವರನ್ನ ಹೇಗಾದರೂ ಮಾಡಿ ಕಟ್ಟಿ ಹಾಕಬೇಕು ಅಂತ ಹೀಗೆಲ್ಲ ಮಾಡುತ್ತಿದ್ದಾರೆ. ಹೊಸ ಸರ್ಕಾರ ಬಂದಾಗಲೆಲ್ಲ ಇಂತಹ ಪ್ರಕ್ರಿಯೆ ಆಗುತ್ತಿರುತ್ತದೆ. ನಮಗೆ ಜಮೀನು ಕೊಟ್ಟವರು ಯಾರು ಇದರ ಬಗ್ಗೆ ಮಾತಾಡಿಲ್ಲ, ದೂರು ಕೊಟ್ಟಿಲ್ಲ. ಈಗ ಕಾಂಗ್ರೆಸ್ ಅವರೇ ಕೆಲವರನ್ನ ಕಳುಹಿಸಿ ವಿಚಾರಣೆ ಮಾಡುತ್ತಿದ್ದಾರೆ. ಈಗ ಮತ್ತೆ ಆ ವಿಷಯ ಉದ್ಭವ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಕಾಲ ಉತ್ತರ ಕೊಡುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಂದಿನ ಕುಂಭಮೇಳ ಎಲ್ಲಿ ನಡೆಯುತ್ತೆ? – ಈಗಲೇ ತಯಾರಿ ಆರಂಭಿಸಿದ ಸರ್ಕಾರ
ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ ಎಂಬ ಸಚಿವರ ಹೇಳಿಕೆಯ ಕುರಿತು ಮಾತನಾಡಿದರು. ರಾಜ್ಯಪಾಲರಿಗೆ ಘನತೆ ಇದೆ. ರಾಜ್ಯಪಾಲರನ್ನ ರಾಜಕೀಯಕ್ಕೆ ಎಳೆಯೋದು ಸರಿಯಲ್ಲ. ರಾಜ್ಯಪಾಲರು ಯಾವುದೇ ನಿರ್ಧಾರ ಕೈಗೊಳ್ಳಲು ಸ್ವತಂತ್ರ ಅಧಿಕಾರ ಇದೆ. ಗಣಿ ಕೇಸ್‌ನಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವ ವಿಚಾರದಲ್ಲಿ ನಮಗೆ ಯಾವುದೇ ಆತಂಕ ಇಲ್ಲ. ತಪ್ಪು ಮಾಡಿದ್ದರೆ ಆತಂಕ ಇರುತ್ತದೆ. ಕುಮಾರಸ್ವಾಮಿ ಅವರು ಯಾವುದೇ ತಪ್ಪು ಮಾಡಿಲ್ಲ. ಯಾರಿಗೂ ಮೋಸ ಆಗಿಲ್ಲ. ಸರ್ಕಾರದ ಬೊಕ್ಕಸಕ್ಕೂ ನಷ್ಟ ಆಗಿಲ್ಲ. ನಮಗೆ ಸ್ಪಷ್ಟತೆ ಇರುವುದರಿಂದ ಯಾವುದೇ ಆತಂಕ ಇಲ್ಲ. ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.