ಶಿವಮೊಗ್ಗ: ಶಿವಮೊಗ್ಗ ಭದ್ರಾವತಿ ನಡುವಿನ ತುಂಗಾ ಸೇತುವೆಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸಿ ಸಾವು-ನೋವು ಸಂಭವಿಸುತ್ತಿವೆ. ಹೀಗಾಗಿ ಜಿಲ್ಲಾಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ ಅವರ ನೇತೃತ್ವದಲ್ಲಿ ನಾಗರಿಕರು ಜಿಲ್ಲಾಧಿಕಾರಿ ಅವರಿಗೆ ಇಂದು ಮನವಿ ಮಾಡಿದರು.
ಈ ರಸ್ತೆಯಲ್ಲಿ ತುಂಗಾ ನದಿಗೆ ಎರಡು ಸೇತುವೆ ನಿರ್ಮಿಸಲಾಗಿದ್ದು, ಒಂದು ಸೇತುವೆ ಸಂಚಾರಕ್ಕೆ ಮುಕ್ತವಾಗಿದ್ದರೆ, ಮತ್ತೊಂದು ಸೇತುವೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿಯೇ ಈ ಸೇತುವೆ ಮೇಲೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುವ ಕಾರಣ ಅಪಘಾತ ಸಂಭವಿಸುತ್ತಿವೆ. ಆದ ಕಾರಣ ಎರಡು ಸೇತುವೆ ಮೇಲೆ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಅಲ್ಲದೇ ಭಾರೀ ವಾಹನ ಹಾಗೂ ಬಸ್‍ಗಳಿಗೆ ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧ ವಿಧಿಸಿ ಬೈಪಾಸ್ ರಸ್ತೆಯ ಮಾರ್ಗವಾಗಿ ಸಂಚರಿಸಲು ಕ್ರಮಕೈಗೊಳ್ಳಬೇಕು. ಈ ಮೂಲಕ ಅಪಘಾತವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಮನವಿ ಮಾಡಿದ್ದಾರೆ.