ಹಲವು ಪ್ರಥಮಗಳ ದಿಟ್ಟ ಮಹಿಳಾ ನಾಯಕಿ ಸುಷ್ಮಾ ಸ್ವರಾಜ್

Public TV
3 Min Read
sushma

ನವದೆಹಲಿ: ತಮ್ಮ ವಾಕ್‍ಚಾತುರ್ಯದಿಂದ ವಿರೋಧಿಗಳಿಗೆ ತಿರುಗೇಟು ನೀಡಿ, ದೇಶ ಹಾಗೂ ಪಕ್ಷದ ಏಳ್ಗೆಗಾಗಿ ದುಡಿದು, ಜನರ ಮನ ಗೆದ್ದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈಗ ನೆನಪು ಮಾತ್ರ. ಆದರೆ ಅವರ ಕೊಡುಗೆಯನ್ನು ಎಂದಿಗೂ ದೇಶವಾಸಿಗಳು ಮರೆಯುವುದಿಲ್ಲ.

ಹೌದು. ಸುಷ್ಮಾ ಸ್ವರಾಜ್ ಎಂದರೆ ಮೊದಲು ನೆನಪಾಗೋದು ಅವರ ವಾಕ್‍ಚಾತುರ್ಯ, ವಿಚಾರ ವಿಮರ್ಶೆ, ಸರಳ ಜೀವನ. ಸುಷ್ಮಾ ಸ್ವರಾಜ್ ಭಾರತ ಇದುವರೆಗೆ ಕಂಡಿದ್ದ ಅದ್ಭುತ ವಿದೇಶಾಂಗ ಸಚಿವೆಯಾಗಿ ಮೆಚ್ಚುಗೆ ಪಡೆದ ಅತ್ಯುತ್ತಮ ರಾಜಕಾರಣಿಯಾಗಿದ್ದಾರೆ. ಅಲ್ಲದೆ ಅತಿ ಕಿರಿಯ ವಯಸ್ಸಿನಲ್ಲಿಯೇ ರಾಜಕಾರಣ ಪ್ರವೇಶಿಸಿ ಹಲವು ಪ್ರಥಮಗಳ ರಾಜಕಾರಣಿಯಾಗಿ ಕೀರ್ತಿಗಳಿಸಿದ್ದಾರೆ. ಇದನ್ನೂ ಓದಿ:ರಾಜಕೀಯವಾಗಿ ಸುಷ್ಮಾ ಸ್ವರಾಜ್ ಬೆಳೆದು ಬಂದಿದ್ದು ಹೇಗೆ?

sushma swaraj 3

ಹಲವು ಪ್ರಥಮಗಳ ಪಟ್ಟಿ:

1. 1977- 25 ವರ್ಷಕ್ಕೆ ಹರಿಯಾಣ ಸಂಪುಟ ಸೇರಿ, ಕಿರಿಯ ವಯಸ್ಸಿನಲ್ಲೇ ಸಂಪುಟ ದರ್ಜೆ ಸಚಿವರಾದ ಮಹಿಳಾ ರಾಜಕಾರಣಿ
2. 1979- 27ನೇ ವಯಸ್ಸಿಗೆ ಹರಿಯಾಣದ ಬಿಜೆಪಿ ರಾಜ್ಯಾಧ್ಯಕ್ಷೆ
3. ರಾಷ್ಟ್ರೀಯ ಪಕ್ಷವೊಂದರ ಮೊದಲ ಮಹಿಳಾ ವಕ್ತಾರೆ
4. ದೆಹಲಿ ಹಾಗೂ ಬಿಜೆಪಿಯ ಮೊದಲ ಮಹಿಳಾ ಮುಖ್ಯವಂತ್ರಿ
5. ಬಿಜೆಪಿ ಪಕ್ಷದಲ್ಲಿ ಪ್ರಥಮಗಳು- ಪಕ್ಷದ ಮೊದಲ ಮಹಿಳಾ ಸಂಪುಟ ಸಚಿವೆ, ಮೊದಲ ಪ್ರಧಾನ ಕಾಯದರ್ಶಿ, ಲೋಕಸಭೆಯ ಮೊದಲ ವಿರೋಧ ಪಕ್ಷ ನಾಯಕಿ, ಮೊದಲ ವಿದೇಶಾಂಗ ಸಚಿವೆ

sushma swaraj

6. ‘ಅತ್ತುತ್ತಮ ಸಂಸದೀಯ ಪಟು’ ಪ್ರಶಸ್ತಿಗಳಿಸಿದ ಏಕೈಕ ಮಹಿಳಾ ಸಂಸದೆ
7. 4 ರಾಜ್ಯಗಳಿಂದ 11 ಚುನಾವಣೆ ಎದುರಿಸಿದ ಏಕೈಕ ಮಹಿಳಾ ರಾಜಕಾರಣಿ
8. ಸ್ಪೇನ್‍ನ ‘ಗ್ರಾಂಡ್ ಕ್ರಾಸ್ ಆಫ್ ಆರ್ಡರ್ ಆಫ್ ಸಿವಿಲ್ ಮೆರಿಟ್’ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ
9. 4 ವರ್ಷಗಳ ಕಾಲ ಹರಿಯಾಣದ ‘ಹಿಂದಿ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷೆ
10. ಅಬುಧಾಬಿಯಲ್ಲಿ ನಡೆದ ಇಸ್ಲಾಂ ರಾಷ್ಟ್ರಗಳ ಶೃಂಗ ಸಭೆಯಲ್ಲಿ ಪಾಲ್ಗೊಂಡ ಮೊದಲ ವಿದೇಶಾಂಗ ಸಚಿವೆ

1970ರಲ್ಲಿ ಎಬಿವಿಪಿ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟ ಸುಷ್ಮಾ ಅವರು, 1975ರಲ್ಲಿ ಜಾರ್ಜ್ ಫರ್ನಾಂಡೀಸ್ ಕಾನೂನು ತಂಡದ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು. ಜಯಪ್ರಕಾಶ್ ನಾರಾಯಣರ ಕ್ರಾಂತಿಯ ಚಳವಳಿಯಲ್ಲಿ ಸಕ್ರಿಯರಾಗಿದ್ದ ಅವರು ತುರ್ತು ಪರಿಸ್ಥಿತಿ ನಂತರ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಕಮಲದ ಕೈ ಹಿಡಿದಿದ್ದರು. 1977ರಂದು ಮೊದಲ ಬಾರಿಗೆ ಸುಷ್ಮಾ ಅವರು ಹರಿಯಾಣ ಶಾಸಕಿಯಾಗಿ ಆಯ್ಕೆಯಾದರು. ಅಂದಿನಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು ಪಕ್ಷದಲ್ಲಿ ಅನೇಕ ಜವಾಬ್ದಾರಿಯನ್ನು ವಹಿಸಿಕೊಂಡು ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಭೇಷ್ ಎನಿಸಿಕೊಂಡಿದ್ದರು.

sushma advani

1990 ರಲ್ಲಿ ರಾಜ್ಯಸಭೆ ಸದಸ್ಯೆಯಾಗಿ ಆಯ್ಕೆಗೊಂಡ ಸುಷ್ಮಾ 1996 ರಲ್ಲಿ ಲೋಕಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ದೆಹಲಿ ಸಿಎಂ ಆಗಿ, ಶಿಕ್ಷಣ ಸಚಿವೆಯಾಗಿ, ವಿದೇಶಾಂಗ ಸಚಿವೆಯಾಗಿ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದ ಸುಷ್ಮಾ ಬಿಜೆಪಿ ಹೈಕಮಾಂಡ್‍ನಂತೆ ಕೆಲಸ ನಿರ್ವಹಿಸಿ ಪಕ್ಷದ ಏಳ್ಗೆಗೆ ದುಡಿದಿದ್ದರು. ಕರ್ನಾಟಕದೊಂದಿಗೂ ಅವಿನಾಭಾವ ಸಂಬಂಧ ಹೊಂದಿದ್ದ ಸುಷ್ಮಾ ಅವರು ಬಳ್ಳಾರಿಯಲ್ಲಿ ಸೋನಿಯಾಗಾಂಧಿ ವಿರುದ್ಧ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲುಕಂಡಿದ್ದರು.

ಅದ್ಭುತ ವಾಗ್ಮಿಯಾಗಿದ್ದ ಸುಷ್ಮಾ ಅವರು, ಪಕ್ಷದ ತತ್ವ-ಸಿದ್ಧಾಂತಕ್ಕಾಗಿ ಸದಾ ಬದ್ಧರಾಗಿದ್ದರು. ಬಿಜೆಪಿಯ ಪ್ರಾಮಾಣಿಕ ನಾಯಕಿಯಾಗಿ, ಜನಪರ ಕೆಲಸಗಳನ್ನು ಮಾಡಿ ಭೇಷ್ ಎನಿಸಿಕೊಂಡಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಿಂದ ಈಗಿನ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದವರೆಗೂ ಅತ್ಯುತ್ತಮ ಕೆಲಸ ಮಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದರು.

Modi Swaraj

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದಕ್ಕೆ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದ ಸುಷ್ಮಾ ಸ್ವರಾಜ್ ಟ್ವೀಟ್ ಸಾವಿನ ಕೊನೆಯ ಕ್ಷಣಗಳಲ್ಲಿಯೂ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ.

ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವರಾಗಿದ್ದ ಅವಧಿಯ ಗಮನ ಸೆಳೆಯುವಂತಹ ಕೆಲಸಗಳನ್ನು ಮಾಡಿದ್ದಾರೆ. ಅನಿವಾಸಿ ಭಾರತೀಯರ ಕಷ್ಟಕ್ಕೆ ಸ್ಪಂದಿಸಿ, ವಿದೇಶಾಂಗ ಇಲಾಖೆಯಲ್ಲಿ ಸಿದ್ಧ ಸೂತ್ರಗಳನ್ನು ಮೀರಿ ಮಹತ್ವದ ಬದಲಾವಣೆ ತಂದಿದ್ದರು. ಪಾಸ್ಪೋರ್ಟ್ ಮೂಲಸೌಕರ್ಯ ವಿಸ್ತರಣೆ ವಿಚಾರ, ಪೂರ್ವ ದೇಶಗಳೊಂದಿಗೆ ಬಾಂಧವ್ಯ ಬೆಸೆಯುವಲ್ಲಿ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದು ಸಮಸ್ಯೆಗಳಿಗೆ ಸ್ಪಂದಿಸಿ ಜನರ ನೆಚ್ಚಿನ ರಾಜಕಾರಣಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *