ಚಿಕ್ಕಮಗಳೂರು: ರಾಷ್ಟ್ರದ ಪ್ರಥಮ ಪ್ರಜೆ ರಾಜ್ಯಕ್ಕೆ ಬಂದರೂ ಉಡುಪಿಯಂತಹ ಪವಿತ್ರ ಸ್ಥಳಕ್ಕೆ ಹೋಗಿ ರಾಷ್ಟ್ರಪತಿ ಹಾಗೂ ಉಡುಪಿಯ ಪೇಜಾವರ ಶ್ರೀಗಳನ್ನ ಭೇಟಿ ಮಾಡದೆ ಸೊಕ್ಕು, ಧಿಮಾಕು ತೋರಿದ ಸಿಎಂ ಸಿದ್ದರಾಮಯ್ಯಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿ ಕಾರಿದ್ದಾರೆ.
ಜನಸಂಪರ್ಕ ಅಭಿಯಾನಕ್ಕೆಂದು ಚಿಕ್ಕಮಗಳೂರಿಗೆ ಆಗಮಿಸಿದ್ದ ಬಿ.ಎಸ್.ಯಡಿಯೂರಪ್ಪ, ತಾಲೂಕಿನ ಮರ್ಲೆ ಗ್ರಾಮದ ಸಣ್ಣತಮ್ಮಯ್ಯರ ಮನೆಯಲ್ಲಿ ಅಕ್ಕಿ ರೊಟ್ಟಿ, ಉಪ್ಪಿಟ್ಟು, ಚಟ್ನಿ ತಿಂದು ತಿಂಡಿಯನ್ನ ಹಾಡಿ ಹೊಗಳಿದ್ರು.
Advertisement
Advertisement
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಸ್‍ವೈ, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ರು. ನಾಲ್ಕು ವರ್ಷದ ಅವಧಿಯಲ್ಲಿ ಸರ್ಕಾರ ಒಬ್ಬನೇ ಒಬ್ಬ ದಲಿತರ ಮನೆ ಬಾಗಿಲಿಗೆ ಹೋಗಿ ಅವರ ಜೀವನ ಶೈಲಿ ಹೇಗಿರುತ್ತೆ, ಅವರ ಕಷ್ಟನಷ್ಟ ಏನೆಂದು ವಿಚಾರಿಸಲಿಲ್ಲ. ಈಗ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಸಿಎಂ ಹಾಗೂ ಮಂತ್ರಿಗಳ ವಿರುದ್ಧ ಕಿಡಿ ಕಾರಿದ್ರು.
Advertisement
ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅರಣ್ಯ ಸಚಿವ ರಮಾನಾಥ್ ರೈ ಹಾಗೂ ದಕ್ಷಿಣ ಕನ್ನಡ ಎಸ್‍ಪಿ ವಿಡಿಯೋ ತುಣುಕಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ, ಕಲ್ಲಡ್ಕ ಪ್ರಭಾಕರ್ ಭಟ್ ಓರ್ವ ಹೋರಾಟಗಾರ. ಎಲ್ಲಾ ಸಮಾಜದವನ್ನ ಒಂದುಗೂಡಿಸಿ ಯುವಕರೊಂದಿಗೆ ಸೇರಿ ಒಳ್ಳೆ ಕೆಲಸ ಮಾಡ್ತಿರುವಂತಹವರ ಮೇಲೆ ಈ ರೀತಿ ಮಾತನಾಡಿ, ಎಲ್ಲರೆದುರು ಅವರನ್ನ ಒಳ ಹಾಕಬೇಕು, ಅವರ ಮೇಲೆ ಕೇಸ್ ಹಾಕಬೇಕೆಂದು ಹೇಳಿರುವುದು ಅಕ್ಷಮ್ಯ ಅಪರಾಧ. ನಾನು ಇನ್ನು ಎರಡು ಮೂರು ದಿನಗಳ ಬಳಿಕ ಮಂಗಳೂರಿಗೆ ಹೋಗುತ್ತೇನೆ. ಇಪ್ಪರಿಂದ ಇಪ್ಪತ್ತೈದು ಸಾವಿರ ಜನ ಸೇರಿಸಿ ದೊಡ್ಡ ಪ್ರತಿಭಟನಾ ಸಭೆಯನ್ನೂ ಮಾಡ್ತಿದ್ದೇವೆ. ಕಲ್ಲಡ್ಕ ಪ್ರಭಾಕರ್ ಭಟ್ಟರ ಬಗ್ಗೆ ಅರಣ್ಯ ಸಚಿವ ರಮಾನಾಥ್ ರೈ ಮಾತನಾಡಿರೋದು ಅಕ್ಷಮ್ಯ ಅಪರಾಧ. ಹದ್ದು ಮೀರಿ ವರ್ತನೆ ಮಾಡ್ತಿರೋ ರಮಾನಾಥ್ ರೈರನ್ನ ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕೆಂದು ವಾಗ್ದಾಳಿ ನಡೆಸಿದ್ರು.