ಹಾವು ಕಚ್ಚಿಸಿಕೊಂಡವ್ರಿಗೆ ಸಂಜೀವಿನಿಯಾಗಿರೋ ಭೂದೇವಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಒತ್ತಾಯ

Public TV
3 Min Read
YGR BHUDEVI 1

ಯಾದಗಿರಿ: ಕಳೆದ ಮೂವತ್ತೈದು ವರ್ಷಗಳಿಂದ ಜನರ ಪಾಲಿಗೆ ಸಂಜೀವಿನಿಯಾಗಿ ಸೇವೆ ಸಲ್ಲಿಸುತ್ತಿರುವ ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ನಿವಾಸಿ ಭೂದೇವಿ, ಹಾವು ಕಚ್ಚಿಸಿಕೊಂಡು (Snake Bite) ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವವರ ಪ್ರಾಣ ಉಳಿಸುವ ಕೆಲಸ ಮಾಡುತ್ತಿದ್ದಾಳೆ. ಸಾವಿರಾರು ಜನರ ಪ್ರಾಣ ಉಳಿಸಿದ ಆ ಮಹಾ ತಾಯಿಯ ನಿಸ್ವಾರ್ಥ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕು ಅನ್ನೋ ಒತ್ತಾಯ ಕೇಳಿಬಂದಿದೆ.

YGR BHUDEVI

ಯಾದಗಿರಿ (Yadagiri) ಜಿಲ್ಲೆಯ ವಡಗೇರ ಪಟ್ಟಣದ ಭೂದೇವಿ ಎನ್ನುವ ಮಹಿಳೆ ಕಳೆದ ಮೂವತ್ತೈದು ವರ್ಷಗಳಿಂದ ಸತತವಾಗಿ ಹಾವು ಕಚ್ಚಿಸಿಕೊಂಡವರಿಗೆ ಔಷಧ ನೀಡುವ ಮೂಲಕ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾಳೆ. ವಡಗೇರ ಪಟ್ಟಣದಲ್ಲಿ ವಾಸ ಮಾಡುತ್ತಿರುವ ಭೂದೇವಿ ಹಾವು ಕಚ್ಚಿದವರು ಬಂದ್ರೆ ಸಾಕು ಎಲೆಯ ಔಷಧಿಯನ್ನ ಕೊಟ್ಟು ಪ್ರಾಣ ಉಳಿಸುವ ಕೆಲಸ ಮಾಡುತ್ತಿದ್ದಾಳೆ. ಮೂರು ತಲೆ ಮಾರುಗಳಿಂದ ಈ ಕುಟುಂಬ ಹಾವು ಕಚ್ಚಿದವರಿಗೆ ಔಷಧಿ ನೀಡುವ ಕಾಯಕವನ್ನ ಮುಂದುವರಿಸಿಕೊಂಡು ಬಂದಿದೆ. ಭೂದೇವಿಗಿಂತ ಮೊದಲು ಭೂದೇವಿಯ ಅತ್ತೆ ತಾಯಮ್ಮ ಔಷಧಿಯನ್ನ ನೀಡುವ ಕೆಲಸ ಮಾಡುತ್ತಿದ್ದರು.

YGR BHUDEVI 4

ತಾಯಮ್ಮಗಿಂತ ಮೊದಲು ತಾಯಮ್ಮಳ ಅತ್ತೆ ನಾಗಮ್ಮ ಗಿಡದ ಎಲೆಗಳನ್ನ ತಂದು ಔಷಧಿಯನ್ನ ಕೊಡುವ ಕೆಲಸ ಮಾಡುತ್ತಿದ್ದರು. ಆದರೆ ನಾಗಮ್ಮ ಹಾಗೂ ತಾಯಮ್ಮಳ ಬಳಿಕ ನಿಸ್ವಾರ್ಥ ಸೇವೆಯನ್ನ ಭೂದೇವಿ ಮಾಡುತ್ತಾ ಬರುತ್ತಿದ್ದಾರೆ. ಕಳೆದ ಮೂವತ್ತೈದು ವರ್ಷಗಳಿಂದ ಸುಮಾರು 4 ಸಾವಿರಕ್ಕೂ ಅಧಿಕ ಜನರಿಗೆ ಔಷಧಿಯನ್ನ ನೀಡಿ ಪ್ರಾಣ ಉಳಿಸುವ ಕೆಲಸ ಮಾಡಿದ್ದಾರೆ. ವಡಗೇರ ಸುತ್ತಮುತ್ತಲಿನ ಗ್ರಾಮದಲ್ಲಿ ಯಾರಿಗಾದ್ರು ಹಾವು ಕಚ್ಚಿದ್ರೆ ನೇರವಾಗಿ ಆಸ್ಪತ್ರೆಗೆ ಹೋಗುವ ಬದಲಿಗೆ ಭೂದೇವಿಯ ಮನೆಗೆ ಬಂದು ಔಷಧಿ ಪಡೆದು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಸಾವಿರಾರು ಜನರಿಗೆ ಔಷಧಿಯನ್ನ ಕೊಟ್ರು ಯಾರಿಂದಲೂ ನಯಾ ಪೈಸೆಯನ್ನ ಭೂದೇವಿ ತೆಗೆದುಕೊಂಡಿಲ್ವಂತೆ.

ಭೂದೇವಿ ವರ್ಷಕ್ಕೆ ಒಂದೇ ಬಾರಿ ಜಮೀನಿಗೆ ಹೋಗಿ ಔಷಧಿಯನ್ನ ತೆಗೆದುಕೊಂಡು ಬರುತ್ತಾಳೆ. ಜಮೀನಿಗೆ ಹೋಗಿ ಔಷಧಿಯನ್ನ ತರಬೇಕು ಅಂದ್ರೆ ಸಾಕಷ್ಟು ನೀತಿ ನಿಯಮಗಳನ್ನ ಪಾಲನೆ ಮಾಡಬೇಕಂತೆ. ಔಷಧಿ ತರಲು ಹೋಗಬೇಕು ಅಂದ್ರೆ ನಸುಕಿನ ಜಾವನೇ ಹೋಗಬೇಕು. ಯಾಕೆಂದ್ರೆ ನಮ್ಮ ನೆರಳು ಸಹ ನಮ್ಮ ಹಿಂದೆ ಬರಬಾರದು. ಇದೇ ಕಾರಣಕ್ಕೆ ನಸುಕಿನ ಜಾವ ಹೋಗಬೇಕು. ಔಷಧಿ ತರಲು ಹೋಗುವ ಮೊದಲು ಮನೆಯನ್ನ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಇಷ್ಟೆಲ್ಲ ನಿಯಮಗಳನ್ನ ಪಾಲನೆ ಮಾಡಿಕೊಂಡು ಹೋಗಿ ಔಷಧಿಯನ್ನ ತರಬೇಕು. ಗಿಡಗಳ ಸಮೇತವಾಗಿ ಔಷಧಿಯನ್ನ ತಂದು ಒಂದು ತಿಂಗಳುಗಳ ಕಾಲ ನೆರಳಲ್ಲಿ ಒಣಗಿಸಬೇಕು. ನೆರಳಲ್ಲಿ ಒಣಗಿಸಿದ ಮೇಲೆ ಎಲೆಯನ್ನ ಗಿಡದಿಂದ ಬೇರ್ಪಡಿಸಿ ಚೆನ್ನಾಗಿ ಅರೆದು ರೆಡಿ ಮಾಡಿಕೊಂಡು ಇಟ್ಟುಕೊಳ್ಳುತ್ತಾರೆ. ಬಳಿಕ ಮನೆಗೆ ಯಾರೆ ಹಾವು ಕಚ್ಚಿದವರು ಬಂದ್ರೆ ಔಷಧಿಯನ್ನ ಕೊಡಲಾಗುತ್ತೆ.

YGR BHUDEVI 2

ಔಷಧಿಯನ್ನ ಪಡೆದವರು ಆವತ್ತು ಒಂದು ದಿನ ಇಡೀ ರಾತ್ರಿ ಮಲಗವಾರದು. ಜೊತೆಗೆ ಹಾವು ಕಚ್ಚಿದೆ ಅಂತ ಬಂದ್ರೆ ಅವರಿಗೆ ಬೇವಿನ ಸೊಪ್ಪು ತಿನ್ನಿಸಿ ಹಾವು ಕಚ್ಚಿದೆ ಇಲ್ಲ ಅಂತ ಚೆಕ್ ಮಾಡಿ ಔಷಧಿಯನ್ನ ನೀಡಲಾಗುತ್ತೆ. ಕಷ್ಟಪಟ್ಟು ಭೂದೇವಿ ಸುಮಾರು ನಾಲ್ಕು ಸಾವಿರ ಜನರ ಪ್ರಾಣವನ್ನ ಉಳಿಸಿದ್ದಾಳೆ. ಎಂತಹದ್ದೆ ಹಾವು ಕಚ್ಚಿದ್ರು ಭೂದೇವಿ ಔಷಧಿಯನ್ನ ನೀಡಿ ಗುಣಪಡಿಸುತ್ತಾಳೆ. ಇಷ್ಟೆಲ್ಲಾ ನಿಸ್ವಾರ್ಥ ಸೇವೆ ಮಾಡಿದ ತಾಯಿಗೆ ಇನ್ನುವರೆಗೆ ಯಾರೂ ಗುರುತಿಸಿಲ್ಲ. ಜಿಲ್ಲಾಡಳಿತ ಆಗಲಿ ಸಂಘ ಸಂಸ್ಥೆಗಳಾಗಲಿ ಗುರುತಿಸಿ ಗೌರವಿಸುವ ಕೆಲಸ ಮಾಡಿಲ್ಲ. ಹೀಗಾಗಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಭೂದೇವಿ ಸೇವೆ ಗೌರವ ಸಲ್ಲಿಸಬೇಕೆಂದು ಚಿಕಿತ್ಸೆ ಪಡೆದವರು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ಎಂತೆಂತವರಿಗೆ ಗುರುತಿಸಿ ಗೌರವಿಸುವ ಕೆಲಸ ಮಾಡುತ್ತೆ. ಆದರೆ ಇಂತಹ ಸದ್ದಿಲ್ಲದೆ ಸಾಧನೆ ಮಾಡುವವರನ್ನ ಗುರುತಿಸುವ ಕೆಲಸ ಮಾಡಬೇಕಾಗಿದೆ. ಸಾವಿರಾರು ಜನರ ಪ್ರಾಣ ಉಳಿಸಿದ ತಾಯಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎನ್ನೋದು ನಮ್ಮ ಆಶಯವಾಗಿದೆ.

Web Stories

Share This Article