ವಿಜಯಪುರ: ಜಿಲ್ಲೆಯ ಕೊಲ್ಹಾರ ಪ್ರದೇಶದ ಬಳಿ ಸರ್ಕಾರಿ ಬಸ್ಸಿಗೆ ಟಂಟಂ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅವರ ವಾಹನದ ಮೇಲೆ ಕಲ್ಲು ತೂರಾಟ ನಡಿಸಿದ್ದಾರೆ.
ಕೊಲ್ಹಾರ ಬಳಿ ಪೊಲೀಸರ ದಂಡ ತಪ್ಪಿಸಲು ಹೋಗಿ ಸರ್ಕಾರಿ ಬಸ್‍ಗೆ ಟಂಟಂ ಡಿಕ್ಕಿಯಾಗಿತ್ತು. ಈ ಭೀಕರ ಅಪಘಾತದಲ್ಲಿ ಟಂಟಂನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, 7 ಮಂದಿ ಗಾಯಗೊಂಡಿದ್ದರು. ಈ ವೇಳೆ ಸ್ಥಳದಲ್ಲಿದ್ದವರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದರು. ಆಗ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರನ್ನು ಕೊಂತಿಕಲ್ ಗ್ರಾಮದ ಕಸ್ತೂರಿ ಸುರೇಶ ಗುಳದಾಳ(32), ಬಾಗಲಕೋಟೆ ಜಿಲ್ಲೆಯ ಸಿಂದಗಿ ಗ್ರಾಮದ ಲಕ್ಷ್ಮಿ ನಿಂಗಪ್ಪ ಆಲಗುಂಡಿ(5), ಗಿರಿಸಾಗರದ ರಾಮಣ್ಣ ಯಮನಪ್ಪ ಮುತ್ತಲದಿನ್ನಿ(70) ಎಂದು ಗುರುತಿಸಲಾಗಿದೆ.
Advertisement
Advertisement
ಟಂಟಂ ಚಾಲಕ ವಾಹನದಲ್ಲಿ ಹೆಚ್ಚು ಮಂದಿ ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ. ಈ ವೇಳೆ ಕೊಲ್ಹಾರ ಬಳಿ ಇದ್ದ ಪೊಲೀಸರು ಟಂಟಂ ನಿಲ್ಲಿಸುವಂತೆ ಕೈ ಮಾಡಿದ್ದಾರೆ. ಇದನ್ನು ಕಂಡ ಚಾಲಕ ವಾಹನ ನಿಲ್ಲಿಸಿದರೆ ಪೊಲೀಸರಿಗೆ ದಂಡ ಕಟ್ಟಬೇಕಲ್ಲ ಎನ್ನುವ ಕಾರಣಕ್ಕೆ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಆತುರದಲ್ಲಿ ಮುಂದೆ ಬರುತ್ತಿದ್ದ ಬಸ್ಸಿಗೆ ಟಂಟಂ ವಾಹನವನ್ನು ಡಿಕ್ಕಿ ಹೊಡಿಸಿದ್ದಾನೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು.
Advertisement
Advertisement
ಪೊಲೀಸರು ಹಾಕುವ ಭಾರೀ ದಂಡದಿಂದಲೇ ಈ ಅಪಘಾತ ನಡೆದಿದೆ. ಜನರ ಜೀವ ಹೋಗಲು ಪೊಲೀಸರೇ ಕಾರಣವೆಂದು ಆರೋಪಿಸಿ ಸಾರ್ವಜನಿಕರು ರೊಚ್ಚಿಗೆದ್ದು, ಸ್ಥಳಕ್ಕೆ ಬಂದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಪಿಐ ವಾಹನ ಹಾಗೂ ಬಸ್ ಮೇಲೆ ಕಲ್ಲು ತೂರಾಟ ನಡೆಸಿ, ಪಿಎಸ್‍ಐ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ ಪಿಎಸ್‍ಐ ಹಾಗೂ ಪೇದೆಗಳ ಮೇಲೆ ಹಲ್ಲೆ ನಡೆಸಿ ಪೊಲೀಸರನ್ನು ಸ್ಥಳದಿಂದ ಓಡಿಸಿದ್ದಾರೆ. ಆದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.