ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಡೆಂಗ್ಯೂ ಮಾಹಾಮಾರಿ ಕಾಲಿಟ್ಟಿದೆ. ಕಡಲ ನಗರಿ ಮಂಗಳೂರಿನ ಜನ ಈಗ ಡೆಂಗ್ಯೂ ಹೆಸರು ಕೇಳಿದರೆ ದೂರಕ್ಕೆ ಓಡುವಂತಾಗಿದೆ.
ಹೌದು. ಕರಾವಳಿ ನಗರಿ ಮಂಗಳೂರಿನಲ್ಲಿ ಈಗ ಎಲ್ಲಿ ಹೋದರೂ ಡೆಂಗ್ಯೂಯದ್ದೇ ಮಾತು. ದಿನದಿಂದ ದಿನಕ್ಕೆ ಡೆಂಗ್ಯೂ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವು ತರಿಸಿದೆ. ದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಮಂಗಳೂರಿನಲ್ಲಿ ಆಷಾಢ ಮಳೆಯ ಮಧ್ಯೆ ಡೆಂಗ್ಯೂ ಜ್ವರ ಹಾವಳಿ ಇಟ್ಟಿದ್ದು, ಈಗಾಗಲೇ 500ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿರುವುದು ಜನರಲ್ಲಿ ಚಿಂತೆಗೀಡು ಮಾಡಿದೆ.
Advertisement
Advertisement
ಜಿಲ್ಲಾಡಳಿತ ಮಾಹಿತಿ ಪ್ರಕಾರ, ಸದ್ಯ ಐನೂರಕ್ಕೂ ಹೆಚ್ಚು ಜನ ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಪ್ರತಿದಿನವೂ ಹೀಗೆ ದಾಖಲಾಗುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಸಾಮಾನ್ಯ ಜನರು ಡೆಂಗ್ಯೂ ಬಗ್ಗೆ ಭೀತಿಗೊಳಗಾಗಿದ್ದಾರೆ. ಮಂಗಳೂರಿನ ನಗರ ವ್ಯಾಪ್ತಿಯ ಗುಜ್ಜರಕೆರೆ, ಮಂಗಳಾದೇವಿ, ಜಪ್ಪಿನಮೊಗರು, ಬೋಳಾರದಲ್ಲಿ ಆರಂಭದಲ್ಲಿ ಕಾಣಿಸಿಕೊಂಡ ಈ ಜ್ವರದ ಹಾವಳಿ, ಈಗ ಇಡೀ ನಗರವನ್ನು ಆವರಿಸಿ ಬಿಟ್ಟಿದೆ. ಒಂದೆಡೆ ಮಳೆ, ಮತ್ತೊಂದೆಡೆ ಬಿಸಿಲು ಬರುತ್ತಿರುವುದು ಡೆಂಗ್ಯೂ ರೋಗ ಹರಡುವ ಸೊಳ್ಳೆಗಳ ಪ್ರಸಾರಕ್ಕೆ ಕಾರಣವಾಗಿದೆ. ಹೀಗಾಗಿ ಜನಸಾಮಾನ್ಯರು ಡೆಂಗ್ಯೂ ಹೆಸರು ಕೇಳಿದರೆ ಭಯ ಪಡುವಂತಾಗಿದೆ.
Advertisement
ಡೆಂಗ್ಯೂ ಜ್ವರಕ್ಕೆ ಮಂಗಳೂರಿನಲ್ಲಿ ಖಾಸಗಿ ಚಾನೆಲ್ ಕ್ಯಾಮರಾಮೆನ್ ಸಹಿತ ನಾಲ್ವರು ಸಾವು ಕಂಡಿರುವ ಬಗ್ಗೆ ಜಿಲ್ಲಾಡಳಿತ ಒಪ್ಪಿಕೊಂಡಿದೆ. ಆದರೆ 10ಕ್ಕೂ ಹೆಚ್ಚು ಜನ ಸಾವು ಕಂಡಿದ್ದರೂ ಜಿಲ್ಲಾಡಳಿತ ಡೆಂಗ್ಯೂನಿಂದಲೇ ಸಾವನ್ನಪ್ಪಿದ್ದಾರೆ ಎಂಬುದನ್ನು ಒಪ್ಪಿಕೊಂಡಿಲ್ಲ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪೀಡಿತರೇ ಹೆಚ್ಚಿರುವುದು ಆತಂಕ ಮೂಡಿಸಿದೆ.
Advertisement
ಇದೇ ವೇಳೆ ಮಂಗಳೂರಿನಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಡೆಂಗ್ಯೂ ಹಾವಳಿಯಿಂದಾಗಿ ಸೊಳ್ಳೆಗಳ ನಾಶಕ್ಕೆ ಮುಂದಾಗಿದೆ. ನೀರು ನಿಲ್ಲುವ ಜಾಗಗಳನ್ನು ಪತ್ತೆ ಮಾಡಿ, ಖಾಸಗಿ ವ್ಯಕ್ತಿಗಳ ವಿರುದ್ಧ ದಂಡ ವಿಧಿಸುತ್ತಿದೆ. ಜೊತೆಗೆ, ಯಾವುದೇ ಕಡೆ ನೀರು ನಿಲ್ಲದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಇದೀಗ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಕೂಡ ಜನರಲ್ಲಿ ಡೆಂಗ್ಯೂ ಜಾಗೃತಿಗೆ ಕರೆ ನೀಡಿದ್ದಾರೆ.
ಒಟ್ಟಿನಲ್ಲಿ ಪ್ರತೀ ವರ್ಷ ಮಳೆಗಾಲದಲ್ಲಿ ಕರಾವಳಿಯಲ್ಲಿ ಸಾಂಕ್ರಾಮಿಕ ರೋಗ ಸಾಮಾನ್ಯ ಎನ್ನುವಂತಾಗಿದೆ. ಹಿಂದೆಲ್ಲಾ ಮಲೇರಿಯಾ, ಫೈಲೇರಿಯಾ ಜನರನ್ನು ಕಾಡುತ್ತಿದ್ದರೆ ಈ ಬಾರಿ ಮಾತ್ರ ಡೆಂಗ್ಯೂ ಹಾವಳಿ ಜನರನ್ನು ಹೈರಾಣು ಮಾಡಿದೆ.