ಬೆಳಗಾವಿ: ತಮ್ಮ ಕಷ್ಟಕ್ಕೆ ಅನುಕೂಲ, ತಮ್ಮ ಗ್ರಾಮದ ಅಭಿವೃದ್ಧಿ ಜೊತೆಗೆ ಮೂಲಭೂತ ಸೌಕರ್ಯಗಳನ್ನ ಒದಗಿಸಿಕೊಡುತ್ತಾರೆ ಎಂದು ಜಿಲ್ಲೆಯ ಗ್ರ್ರಾಮದ ಜನರು ಅವರನ್ನೆಲ್ಲಾ ಚುನಾಯಿಸಿ ಕಳುಹಿಸಿದ್ದರು. ಹೀಗೆ ಆಯ್ಕೆಯಾದ ಅವರು ಜನ ಸೇವೆ ಮರೆತು ಅಧಿಕಾರದ ದುರ್ಬಳಕೆ ಮಾಡಿಕೊಳ್ಳಲು ಆರಂಭಿಸಿರುವುದು ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
Advertisement
ಹೌದು. ಒಂದು ಕಡೆ ಬಿರು ಬೇಸಿಗೆಯ ಎಫೆಕ್ಟ್. ಇನ್ನೊಂದು ಕಡೆ ನೀರಿಗಾಗಿ ಹಾಹಾಕಾರ. ಕಲ್ಲಿನ ಗುಡ್ದದ ಕೆಳಭಾಗದಲ್ಲಿರುವ ಈ ಗ್ರಾಮ ಹಲವು ದಶಕಗಳಿಂದ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಇದನ್ನ ಮನಗಂಡ ಸರ್ಕಾರ 96 ಲಕ್ಷ ವೆಚ್ಚದಲ್ಲಿ ಎರಡು ದೊಡ್ಡ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿದೆ. ಆರಂಭದಲ್ಲಿ ಗ್ರಾಮಸ್ಥರಿಗೆ ನೀರು ಕೂಡ ಸಿಕ್ಕಿತ್ತು. ಆದರೆ ಕ್ರಮೇಣ ಗುಡ್ಡದಲ್ಲಿದ್ದ ಬೋರ್ ವೆಲ್ ಬತ್ತಿ ಹೋಗಿ ಗ್ರಾಮಸ್ಥರು ಮತ್ತೆ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Advertisement
Advertisement
ಹತ್ತು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ 23 ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ನೀರಿನ ಸಮಸ್ಯೆಯನ್ನ ಬಗೆ ಹರಿಸಬೇಕಿದ್ದ ಸದಸ್ಯರುಗಳು ಇರೋ ಒಂದು ಬೋರ್ ವೆಲ್ ನೀರನ್ನ ತಮ್ಮ ತಮ್ಮ ಮನೆಗಳಿಗೆ ಪೈಪ್‍ಲೈನ್ ಮಾಡಿಸಿಕೊಂಡು ನೀರು ಬಿಡಿಸಿಕೊಳ್ಳುತ್ತಾ ನೆಮ್ಮದಿಯಿಂದಿದ್ದಾರೆ. ಇತ್ತ ತಾವೇ ಆಯ್ಕೆ ಮಾಡಿ ಕಳುಹಿಸಿರುವ ಗ್ರಾಮ ಪಂಚಾಯ್ತಿ ಸದಸ್ಯರುಗಳು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ವೈದ್ಯರಾದ ಡಾ. ಯೂಸುಫ್ ಕಿಡಿಕಾರಿದ್ದಾರೆ.
Advertisement
ಗ್ರಾಮದ ಮಧ್ಯದಲ್ಲಿ ಒಂದು ಬೋರವೆಲ್ ಇದ್ದು ಅದರಿಂದ ನೀರು ಇಡೀ ಗ್ರಾಮಕ್ಕೆ ಬಿಡಲಾಗುತ್ತಿದೆ. ಆದರೆ ಸಣ್ಣ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಕೊಡ ತುಂಬಲು ಗಂಟೆ ಗಟ್ಟಲೆ ಕಾಯಬೇಕು. ಕಾರ್ಮಿಕರು ತಮ್ಮ ಕೂಲಿ ಕೆಲಸ ಬಿಟ್ಟು ನಲ್ಲಿ ಮುಂದೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ‘ಜಲಯುದ್ಧ’ ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಜಿಪಂ ಸಿಇಓ ಸ್ಥಳಕ್ಕೆ ದಿಢೀರ್ ಭೇಟಿ
ಗುಡ್ಡದ ಮೇಲೆ ಮನೆ ಇರುವವರ ಪರಿಸ್ಥಿತಿ ಇನ್ನೂ ದಾರುಣ. ಒಂದು ಕಿಲೋಮೀಟರ್‍ನಷ್ಟು ದೂರ ನಡೆದು ಹೋಗಿ ನೀರು ತುಂಬಿಕೊಂಡು ಕೊಡ ಹೊತ್ತು ಮತ್ತೆ ಮೇಲಕ್ಕೆ ಹತ್ತಬೇಕು. ರಸ್ತೆ ಕೂಡ ಸರಿಯಾಗಿ ಇಲ್ಲದ ಕಾರಣ ಎಲ್ಲೆಂದರಲ್ಲಿ ಜನ ಬೀಳೋದು ಸಾಮಾನ್ಯವಾಗಿದೆ. ಹೀಗಿದ್ದರೂ ಮಹಿಳೆಯರು ಮಕ್ಕಳು ಎರಡೆರಡು ಕೊಡ ಹೊತ್ತು ಗುಡ್ಡದ ಮೇಲಿರುವ ಮನೆಯತ್ತ ಸಾಗುತ್ತಾರೆ. ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವೊಮ್ಮೆ ಒಳಚರಂಡಿ ನೀರು ಕೂಡ ಕುಡಿಯುವ ನೀರಿನಲ್ಲಿ ಮಿಕ್ಸ್ ಆಗಿ ಗ್ರಾಮಸ್ಥರು ಕಾಯಿಲೆ ಬೀಳುತ್ತಿರುವುದು ಕೂಡ ಕಂಡಬಂದಿದೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಗೌರಮ್ಮ ದೂರಿದ್ದಾರೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಇಲ್ಲದಂತಾಗಿದೆ. ಅದನ್ನ ಬಳಕೆ ಮಾಡದೇ ಕೀ ಹಾಕಿ ಹಾಗೇ ಇಟ್ಟಿದ್ದರಿಂದ ಯಂತ್ರಗಳು ಕೂಡ ಹಾಳಾಗುತ್ತಿವೆ. ಜನರ ಸಮಸ್ಯೆಗಳನ್ನ ಆಲಿಸಿ ಪರಿಹರಿಸಬೇಕಿದ್ದ ಜನಪ್ರತಿನಿಧಿಗಳೇ ಇಂದು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇತ್ತ ಜಿಲ್ಲಾಡಳಿತ ಕೂಡ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜನರಿಗೆ ನೀರು ಕೊಡಿಸುವ ಕೆಲಸ ಮಾಡಬೇಕಿದೆ.