ಚಿಕ್ಕಮಗಳೂರು: ವಿದ್ಯುತ್ ಇಲಾಖೆ ತೋಡಿದ್ದ ಗುಂಡಿಗೆ ಐದಾರು ದನಕರುಗಳು ಬಿದ್ದು ಇಡೀ ರಾತ್ರಿ ನರಳಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್‍ನಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಸುಭಾಷ್ ನಗರದಲ್ಲಿ ಮೆಸ್ಕಾಂ ಸಿಬ್ಬಂದಿ ಸುಮಾರು 10-15 ಅಡಿ ಆಳದ 20 ಗುಂಡಿಗಳನ್ನ ತೋಡಿದ್ದರು. ಆದರೆ ಅದರ ಸುತ್ತಲೂ ಯಾವುದೇ ಬೇಲಿಯನ್ನೂ ಹಾಕಿರಲಿಲ್ಲ. ಸೋಮವಾರ ಸಂಜೆ ಮೇವು ಮೇಯ್ದುಕೊಂಡು ಬಂದ ಆರು ದನಕರುಗಳು ಆ ಗುಂಡಿಯಲ್ಲಿ ಬಿದ್ದಿದೆ. ಇಡೀ ರಾತ್ರಿ ಅಲ್ಲೇ ಗೋಳಿಟ್ಟಿವೆ. ಬೆಳಗ್ಗೆ ಗುಂಡಿಯಿಂದ ದನಕರುಗಳು ಕೂಗುತ್ತಿದ್ದ ಸದ್ದನ್ನು ಕೇಳಿ ಸ್ಥಳೀಯರು ಹಗ್ಗದ ಸಹಾಯದಿಂದ ಹಸುಗಳನ್ನ ಮೇಲೆತ್ತಿದ್ದಾರೆ.
Advertisement
Advertisement
ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಅಂಗನವಾಡಿಯೂ ಇದೆ. ಆದರೆ ಗುಂಡಿಯನ್ನು ತೋಡಿಟ್ಟು ಮೆಸ್ಕಾಂ ಅಧಿಕಾರಿ ಸುಮ್ಮನಿದ್ದಾರೆ. ಅಪಾಯವನ್ನ ಬಾಯ್ತೆರೆದು ಕುಳಿತುರುವ ಗುಂಡಿಗಳ ಸುತ್ತಲೂ ಇಲಾಖೆ ಯಾವುದೇ ಬಂದೋಬಸ್ತ್ ಕೂಡ ಮಾಡಿಲ್ಲ. ಇಂದು ದನಕರುಗಳು ಬಿದ್ದಿವೆ. ನಾಳೆ ಪುಟ್ಟ ಪುಟ್ಟ ಮಕ್ಕಳು ಬಿದ್ದು ಹೆಚ್ಚುಕಮ್ಮಿಯಾದರೆ ಏನು ಗತಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಇಲಾಖೆ ಗುಂಡಿಯ ಸುತ್ತಲೂ ಬೇಲಿ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.