ಬೆಂಗಳೂರು: ಹಜ್ ಖಾತೆ ಮುಸ್ಲಿಂ ಸಚಿವರಿಗೆ ಸೇರಬೇಕು. ಹೀಗಾಗಿ ಖಾತೆಯನ್ನು ಸಚಿವ ಯು.ಟಿ.ಖಾದರ್ ಅವರಿಗೆ ನೀಡಬೇಕು ಇಲ್ಲವೇ ನನಗೆ ನೀಡಬೇಕು ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹಜ್ ಖಾತೆ ಕೈತಪ್ಪಿರುವುದಕ್ಕೆ ರೋಷನ್ ಬೇಗ್ ಅವರಿಗೆ ಅಸಮಾಧಾನ ಇರೋದು ಸಹಜ. ಪಾಪ ಅವರು ಕೂಡ ಹಜ್ ಖಾತೆ ನಿಭಾಯಿಸಿದವರು. ಆದರೆ ಈಗ ಅವರು ಸಚಿವರಾಗಿಲ್ಲ. ಸಚಿವರಾಗದೇ ಅವರಿಗೆ ಹಜ್ ಖಾತೆ ಹೇಗೆ ನೀಡಲು ಬರುತ್ತದೆ ಎಂದು ಅವರು ಪ್ರಶ್ನಿಸಿದರು.
Advertisement
Advertisement
ಹಜ್ ಖಾತೆಯನ್ನು ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಅವರಿಗೆ ನೀಡಿದರೆ ಸಂತೋಷವಿದೆ. ಸದ್ಯ ಹಜ್ ಯಾತ್ರೆಗೆ ರಾಜ್ಯದಿಂದ 5,200 ಮಂದಿಗೆ ತೆರಳಲು ಅವಕಾಶವಿದೆ. ನನಗೆ ಹಜ್ ಖಾತೆ ದೊರೆತರೆ 2 ಸಾವಿರ ಮಂದಿಗೆ ಸಿಗುವಂತೆ ಮಾಡುತ್ತೇನೆ ಎಂದು ಸಚಿವ ಜಮೀರ್ ಅಹಮದ್ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಜ್ ಯಾತ್ರೆಗೆ ಭಾರತದಿಂದ ಈಗ ಎಷ್ಟು ಮಂದಿ ತೆರಳುತ್ತಿದ್ದಾರೆ?
Advertisement
ನಾನು ಹೊಂದಾಣಿಕೆ ಮಾಡಿಕೊಂಡು ಹೋಗುವ ರಾಜಕಾರಣಿಯಲ್ಲ. ಯಾರಿಗೂ ವಿನಾಕಾರಣ ಸವಾಲು ಹಾಕುವುದಿಲ್ಲ. ಆದರೆ ನನಗೆ ಸವಾಲು ಹಾಕುವವರಿಗೆ ಉತ್ತರ ನೀಡದೇ ಬಿಡುವುದಿಲ್ಲ. ನಾನೊಬ್ಬ ಸಮಾಜ ಸೇವಕ, ಸಮಾಜ ಸೇವೆಗೆ ಬಂದವನು. ಇದೇ ಬೇಕು ಎಂದು ಪಟ್ಟು ಹಿಡಿದಿಲ್ಲ. ಸಿದ್ದರಾಮಯ್ಯ ಹಾಗೂ ಜಿ.ಪರಮೇಶ್ವರ್ ಕೃಪೆಯಿಂದ ನಾನು ಮಂತ್ರಿಯಾಗಿಲ್ಲ. ನನ್ನ ಹಣೆಬರಹದಲ್ಲಿ ಮಂತ್ರಿ ಸ್ಥಾನವಿತ್ತು. ಹೀಗಾಗಿ ಆಗಿರುವೆ ಎಂದು ಸಚಿವರು ಟಾಂಗ್ ನೀಡಿದರು.
Advertisement
ಶಾಸಕ ತನ್ವೀರ್ ಸೇಠ್ ಅವರನ್ನು ನಾನು ಸೋಲಿಸಲು ಪ್ರಯತ್ನಿಸಿಲ್ಲ. ಒಂದು ವೇಳೆ ಹಾಗೆ ಮಾಡಿದ್ದರೆ ತಕ್ಷಣವೇ ಅವರು ಹೈಕಮಾಂಡ್ ಗೆ ದೂರು ಕೊಡಬೇಕಿತ್ತು. ಆದರೆ ಈಗ ನನ್ನನ್ನು ಜಮೀರ್ ಅಹಮದ್ ಸೋಲಿಸಲು ಪ್ರಯತ್ನಿಸಿದ್ದರು ಎಂದು ಆರೋಪಿಸುವುದು ಸೂಕ್ತವಲ್ಲ. ಹೈಕಮಾಂಡ್ ಅರ್ಹತೆ ಇದ್ದವರಿಗೆ ಮಾತ್ರ ಮಂತ್ರಿ ಸ್ಥಾನ ಕೊಡುತ್ತದೆ. ಹೀಗಾಗಿ ನನಗೆ ಸಚಿವ ಸ್ಥಾನ ದೊರೆತಿದೆ. ಅರ್ಹತೆ ಇಲ್ಲದೆ ಮಂತ್ರ ಮಾಡಲು ನಾನು ರಾಹುಲ್ ಗಾಂಧಿ ಅವರ ಸಂಬಂಧಿಯಲ್ಲ. ತನ್ವೀರ್ ಸೇಠ್ ಜೊತೆಗೆ ಅವರ ಕ್ಷೇತ್ರಕ್ಕೆ ಹೋಗಿ ಕೇಳಿದರೆ, ಜನರು ಯಾರಿಗೆ ಬೆಂಬಲ ನೀಡುತ್ತಾರೆ ಎನ್ನುವುದು ಅರ್ಥವಾಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ತಿರುಗೇಟು ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಾರು ನನಗ್ಯಾಕೆ ಬೇಕು: ಮಾಧ್ಯಮಗಳ ಮುಂದೆ ಕಾರಣ ಬಿಚ್ಚಿಟ್ಟ ಜಮೀರ್ ಅಹ್ಮದ್
ಬಿಪಿಎಲ್ ಕಾರ್ಡ್ ಗಳಿಗೆ ಆಧಾರ್ ಸಂಖ್ಯೆ ಜೋಡಣೆಗೆ ಕೇಂದ್ರದಿಂದ ಆದೇಶ ಬಂದಿದೆ. ಬಿಪಿಎಲ್ ಕಾರ್ಡ್ ನಲ್ಲಿ ಕುಟುಂಬದ ಸದಸ್ಯರನ್ನು ಹಾಗೂ ಆಧಾರ್ ಸಂಖ್ಯೆ ಸೇರಿಸಲು ಮುಂದಿನ ಆರು ತಿಂಗಳವರೆಗೆ ಕಾಲಾವಕಾಶ ನೀಡಲಾಗಿದೆ. ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳಿಗೂ ಸೂಚನೆ ನೀಡಿರುವೆ ಎಂದು ಅವರು ಸ್ಪಷ್ಟ ಪಡಿಸಿದರು.