ಉಡುಪಿ: ಅಸ್ಪೃಶ್ಯತೆ ನಿವಾರಣೆ ಉದ್ದೇಶ ಇಟ್ಟುಕೊಂಡು ಪೇಜಾವರಶ್ರೀಗಳು ದಲಿತ ಕೇರಿಗೆ ಪ್ರವೇಶ ಮಾಡಿದ್ದು, ಬ್ರಾಹ್ಮಣ ವಲಯದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. 1960ರ ಈ ಸಾಮಾಜಿಕ ಕ್ರಾಂತಿಯನ್ನು ನೆನೆದು ದಲಿತ ವಠಾರ ಹೆಮ್ಮೆ ವ್ಯಕ್ತಪಡಿಸಿದೆ.
ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ 60ರ ದಶಕದಲ್ಲಿ ಮಾಡಿದ ಕ್ರಾಂತಿ ದೇಶದಲ್ಲೇ ಸಂಚಲನವನ್ನುಂಟು ಮಾಡಿತ್ತು. ಕೇರಿ ಪ್ರವೇಶ, ಪಾದಪೂಜೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ದಲಿತರಿಗೆ ಬ್ರಾಹ್ಮಣ ದೀಕ್ಷೆ ಕೂಡಾ ಶ್ರೀಗಳು ಮಾಡಿದ ಕ್ರಾಂತಿಗಳಲ್ಲೊಂದು. ವಿಶ್ವೇಶತೀರ್ಥ ಸ್ವಾಮೀಜಿ ಆರಾಧನೆಯನ್ನು ಕರಂಬಳ್ಳಿಯ ದಲಿತ ಬಡಾವಣೆಯಲ್ಲಿ ಆಚರಿಸಲಾಯ್ತು.
ಪೇಜಾವರಶ್ರೀ ಭಾವಚಿತ್ರ ಇಟ್ಟು ಶ್ರೀಗಳ ಹೋರಾಟ, ದಲಿತ ಕೇರಿಗೆ ಹೋದ ನೆನಪುಗಳನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಲಾಯಿತು. ಸ್ಥಳೀಯರಾದ ಭುಜಂಗ ಮಾತನಾಡಿ, ಪೇಜಾವರ ಸ್ವಾಮೀಜಿ ಬ್ರಾಹ್ಮಣರಾಗಿದ್ದರೂ ನಮ್ಮ ವಠಾರಕ್ಕೆ ಬಂದಿದ್ದರು. ನಮ್ಮ ಪುಣ್ಯ ಎಂದು ಇದನ್ನು ಭಾವಿಸುತ್ತೇವೆ. ಇವತ್ತು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆಶೀರ್ವಾದ ನಮ್ಮ ಜೊತೆ ಇದೆ ಎಂದು ಹೇಳಿದರು.
ಕರಂಬಳ್ಳಿ ವ್ಯಾಪ್ತಿಯ ಹಿಂದುಳಿದ, ದಲಿತ, ಕೊರಗ, ಸಮುದಾಯದ ನೂರಾರು ಜನ ಶ್ರೀಗಳಿಗೆ ಪುಷ್ಪಾಂಜಲಿ ಅರ್ಪಣೆ ಮಾಡಿದರು. ಆರಾಧನೆ ಲೆಕ್ಕದ ವಿಶೇಷ ಭೋಜನ ಸ್ವೀಕರಿಸಿದರು. ಪೇಜಾವರಶ್ರೀ ಕಾರ್ಯಕ್ರಮ ಆಯೋಜನೆಯಾದ ಸಂದರ್ಭದಲ್ಲಿ ಈ ಭಾಗಕ್ಕೆ ಆಗಾಗ ಭೇಟಿ ನೀಡುತ್ತಿದ್ದರು ಎಂದು ಇಲ್ಲಿನ ಜನ ಸ್ಮರಿಸುತ್ತಾರೆ.