– ಸುಪ್ರೀಂ ತೀರ್ಪಿಗೆ ಭುಗಿಲೆದ್ದ ಭಕ್ತರ ಆಕ್ರೋಶ
ಬೆಂಗಳೂರು: 2009ರ ನಂತರ ನಗರದಲ್ಲಿ ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಗಳನ್ನ ತೆರವುಗೊಳಿಸಿ ಎಂಬ ಸುಪ್ರೀಂ ಕೋರ್ಟ್ ಆದೇಶಕ್ಕೆ ಭಕ್ತರ ಆಕ್ರೋಶ ಭುಗಿಲೆದ್ದಿದೆ.
ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ನಗರದಲ್ಲಿ ಒಟ್ಟು 43 ದೇವಸ್ಥಾನಗಳ ತೆರವಿಗೆ ಬಿಬಿಎಂಪಿ ಮುಂದಾಗಿದೆ. 43 ದೇವಸ್ಥಾನಗಳ ಪೈಕಿ ಮಾಗಡಿ ರಸ್ತೆಯ ಸಾಯಿಬಾಬಾ ಮಂದಿರ ಕೂಡ ಸೇರಿದೆ. ಪಾಲಿಕೆಯ ಅಧಿಕಾರಿಗಳು ಇಂದು ಈ ಮಂದಿರವನ್ನು ತೆರವು ಮಾಡಲು ಜೆಸಿಬಿ, ಟ್ರ್ಯಾಕ್ಟರ್ ಜೊತೆಗೆ ಸ್ಥಳಕ್ಕೆ ಆಗಮಿಸಿದ್ದರು. ಆದರೆ ಯಾವುದೇ ಕಾರಣಕ್ಕೆ ಕೆಡವಲು ಬಿಡುವುದಿಲ್ಲ. ನಮ್ಮ ರಕ್ತವನ್ನ ಕೊಟ್ಟಾದ್ರೂ ಮಂದಿರವನ್ನು ಉಳಿಸಿಕೊಳ್ತೇವೆ. ಕೆಡವುದಾದರೆ ನಮ್ಮ ಹೆಣದ ಮೇಲೆ ಜೆಸಿಬಿ ಹತ್ತಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
Advertisement
Advertisement
ಪ್ರತಿಭಟನೆಯ ಕಾವು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದರು. ಅಲ್ಲದೇ ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಹರಸಹಾಸ ಪಟ್ಟರು. 11 ಘಂಟೆ ಸುಮಾರಿಗೆ ಗೋವಿಂದರಾಜನಗರ ವಿಭಾಗದ ಬಿಬಿಎಂಪಿಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಲರಾಮ್ ಸ್ಥಳಕ್ಕೆ ಬರುತ್ತಿದಂತೆ ಪ್ರತಿಭಟನೆಯ ಕಿಚ್ಚು ಹೆಚ್ಚಾಯಿತು.
Advertisement
ಸಾಯಿಬಾಬಾ ಮಂದಿರ ತೆರವು ಮಾಡುವ ಕುರಿತು ಮರು ಪರಿಶೀಲಿಸಿ ಎಂದು ಸಾಯಿಬಾಬಾ ಗಣಪತಿ ಟ್ರಸ್ಟ್, ಸುಪ್ರೀಂಕೋರ್ಟ್ ಗೆ ಅರ್ಜಿಯನ್ನ ಸಲ್ಲಿಸಿದೆ. ಈ ಅರ್ಜಿಯನ್ನ ಪಾಲಿಕೆಯ ಅಧಿಕಾರಿಗಳಿಗೆ ತೋರಿಸಿ ಎರಡು ದಿನ ಕಾಲವಕಾಶ ನೀಡಿ ಎಂದು ದೇವಸ್ಥಾನದ ಆಡಳಿತ ಮಂಡಳಿ ಪಾಲಿಕೆಯ ಅಧಿಕಾರಿಗಳ ಜೊತೆ ಮನವಿ ಮಾಡಿಕೊಂಡಿತು. ಮನವಿಗೆ ಪೂರಕವಾಗಿ ಸ್ಪಂದಿಸಿದ ಪಾಲಿಕೆಯ ಅಧಿಕಾರಿಗಳು ಕಟ್ಟಡ ತೆರವಿಗೆ ಎರಡು ದಿನಗಳ ಕಾಲ ತಾತ್ಕಾಲಿಕ ರಿಲೀಫ್ ನೀಡಿದ್ದಾರೆ.
Advertisement
ಪಾಲಿಕೆ ಅಧಿಕಾರಿ ಬಲರಾಮ್ ಮಾತನಾಡಿ, ಮೇಲಾಧಿಕಾರಿಗಳು ಹೇಗೆ ಸೂಚನೆ ಕೊಡುತ್ತಾರೆ. ಈಗಲೇ ಕೆಡವಿ ಎಂದು ಸೂಚನೆ ಕೊಟ್ಟರೆ ಕೂಡಲೇ ತೆರವು ಮಾಡುತ್ತೇವೆ ಎಂದು ಹೇಳಿದರು. ಬೆಳಗ್ಗೆ ಮಂದಿರಕ್ಕೆ ಬೀಗ ಜಡಿದಿದ್ದ ಪಾಲಿಕೆಯ ಅಧಿಕಾರಿಗಳು ಮಧ್ಯಾಹ್ನದ ವೇಳೆಗೆ ಬೀಗವನ್ನ ತೆಗೆದರು. ಬೀಗ ತೆಗೆಯುತ್ತಿದ್ದಂತೆ ಭಕ್ತರು ಸಾಯಿಬಾಬಾ ದೇಗುಲದೊಳಗೆ ಭಾವುಕತೆಯಿಂದ ತೆರಳಿದರು.