ಶೆಹಬಾಜ್ ಷರೀಫ್ ಪಾಕ್ ಪ್ರಧಾನಿಯಾಗುವಂತೆ ಭಾರತದ ಹಳ್ಳಿಯಲ್ಲಿ ಪ್ರಾರ್ಥನೆ

Public TV
2 Min Read
Shehbaz Sharif

ಚಂಡೀಗಢ: ಇತ್ತೀಚಿನ ದಿನಗಳಲ್ಲಿ ಭಾರತ ಮೂಲದ ಹಲವು ವ್ಯಕ್ತಿಗಳು ಪ್ರಪಂಚದಾದ್ಯಂತ ರಾಜಕೀಯ ವ್ಯವಹಾರಗಳಲ್ಲಿ ಚುಕ್ಕಾಣಿ ಹಿಡಿದಿರುವುದನ್ನು ನಾವು ನೋಡಿದ್ದೇವೆ. ಅಮೆರಿಕ ಸಂಯುಕ್ತ ಸಂಸ್ಥಾನದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಹಲವರು ಉನ್ನತ ಮಟ್ಟದ ಸ್ಥಾನವನ್ನು ಏರಿದ್ದಾರೆ. ಇದೀಗ ಭಾರತೀಯ ಮೂಲದ ವ್ಯಕ್ತಿ ಪಾಕಿಸ್ತಾನವನ್ನು ಮುನ್ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.

ಪಾಕಿಸ್ತಾನದ ಪ್ರಧಾನಿ ಪಟ್ಟದಿಂದ ಇಮ್ರಾನ್ ಖಾನ್ ಪದಚ್ಯುತಿಗೊಂಡ ಬಳಿಕ ಶೆಹಬಾಜ್ ಷರೀಫ್ ನೂತನ ಪ್ರಧಾನಿಯಾಗಲಿದ್ದಾರೆ ಎಂದು ವರದಿಯಾಗಿದೆ. ಭಾರತದಲ್ಲೂ ಇವರೇ ಪಾಕಿಸ್ತಾನದ ಪ್ರಧಾನಿಯಾಗಬೇಕೆಂದು ಈ ಪುಟ್ಟ ಹಳ್ಳಿಯೊಂದರಲ್ಲಿ ಪ್ರಾರ್ಥನೆ ಮಾಡಲಾಗುತ್ತಿದೆ. ಮುಂದಿನ ಪ್ರಧಾನಿ ಇವರೇ ಎಂದು ಸಂಭ್ರಮಾಚರಣೆಯೂ ನಡೆಯುತ್ತಿದೆ. ಇದಕ್ಕೆ ಕಾರಣ ಶೆಹಬಾಜ್ ಷರೀಫ್ ಒಬ್ಬ ಭಾರತದೊಂದಿಗೆ ಸಂಪರ್ಕವುಳ್ಳ ವ್ಯಕ್ತಿ.

Shehbaz Sharif

ಭಾರತ ಹಾಗೂ ಪಾಕಿಸ್ತಾನದ ಸಂಬಂಧ ಸೌಹಾರ್ದಯುತವಾಗಿಲ್ಲದಿದ್ದರೂ ಅಮೃತಸರದ ಗಡಿ ಗ್ರಾಮ ಜಟಿ ಉಮ್ರಾದಲ್ಲಿ ಶೆಹಬಾಜ್ ಷರೀಫ್ ಮುಂದಿನ ಪ್ರಧಾನಿಯಾಗಲಿ ಎಂದು ಸ್ಥಳೀಯರು ಇಲ್ಲಿನ ಗುರುದ್ವಾರದಲ್ಲಿ ಪ್ರಾರ್ಥನೆ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಈ ಪುಟ್ಟ ಗ್ರಾಮ ಷರೀಫ್ ಕುಟುಂಬದ ಪೂರ್ವಜರ ಊರು. ಇದನ್ನೂ ಓದಿ: ಚೌಕಿದಾರ್ ಚೋರ್ ಹೇ ಎಂದ ಪಾಕಿಸ್ತಾನಿ ಪ್ರತಿಭಟನಾಕಾರರು

ತಮ್ಮ ಮಣ್ಣಿಗೆ ಸಂಬಂಧ ಪಟ್ಟವರು ಉನ್ನತ ಹುದ್ದೆಗೆ ಬಂದರೆ ಅದು ಆ ಗ್ರಾಮಕ್ಕೆ ಹೆಮ್ಮೆಯ ವಿಚಾರ. ಅವಿಭಜಿತ ಭಾರತದ ಪಂಜಾಬ್‌ನಲ್ಲಿರುವ ಈ ಗ್ರಾಮ ಹಿಂದೂ ಬಹುಸಂಖ್ಯಾತ ಗ್ರಾಮವಾಗಿತ್ತು. ಭಾರತ-ಪಾಕಿಸ್ತಾನ ವಿಭಜನೆಯ ಬಳಿಕ ಷರೀಫ್ ಕುಟುಂಬ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು. ಆದರೂ ಷರೀಫ್ ಇನ್ನೂ ಈ ಗ್ರಾಮದೊಂದಿಗೆ ಸಂಪರ್ಕದಲ್ಲಿದ್ದಾರೆ.

Shehbaz Sharif

ವಾಸ್ತವವಾಗಿ ಷರೀಫ್ ಕುಟುಂಬ ಕಾಶ್ಮೀರ ಮೂಲದವರು. ಅವರ ತಂದೆ ಅನಂತನಾಗ್‌ನಿಂದ ಪಂಜಾಬ್‌ನ ಈ ಹಳ್ಳಿಗೆ ಬಂದಿದ್ದರು. ಅವರ ತಾಯಿ ಪುಲ್ವಾಮಾಗೆ ಸೇರಿದವರು. ವಿಭಜನೆಯ ಬಳಿಕ ಕುಟುಂಬ ಪಾಕಿಸ್ತಾನಕ್ಕೆ ತೆರಳಲು ನಿರ್ಧರಿಸಿತು. ಬಳಿಕ ಲಾಹೋರ್‌ನಲ್ಲಿ ವ್ಯಾಪಾರ ಪ್ರಾರಂಭಿಸಿದ ಷರೀಫ್ ತಂದೆ ಉನ್ನತಿ ಪಡೆದರು. ಪ್ರಸ್ತುತ ಷರೀಫ್ ಅವರ ಇತ್ತೆಫಾಕ್ ಗ್ರೂಪ್ ಪಾಕಿಸ್ತಾನದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಇಂದಿನಿಂದ ಪಾಕಿಸ್ತಾನದಲ್ಲಿ ಮತ್ತೆ ಸ್ವಾತಂತ್ರ್ಯ ಹೋರಾಟ ಪ್ರಾರಂಭ: ಇಮ್ರಾನ್ ಖಾನ್

ಶೆಹಬಾಜ್ ಷರೀಫ್ ಹಾಗೂ ಅವರ ಸಹೋದರ ನವಾಜ್ ಷರೀಫ್ ಭಾರತದ ಗ್ರಾಮದಲ್ಲಿ ಹುಟ್ಟಿರಲಿಲ್ಲ. ಇಬ್ಬರೂ ಸ್ವಾತಂತ್ರ್ಯದ ಬಳಿಕ ಲಾಹೋರ್‌ನಲ್ಲಿ ಜನಿಸಿದರು. ಆದರೆ ಷರೀಫ್ ಕುಟುಂಬ ಇಂದಿಗೂ ಈ ಹಳ್ಳಿಯೊಂದಿಗೆ ಸಂಬಂಧ ಇಟ್ಟುಕೊಂಡಿದೆ. ಹಲವು ಬಾರಿ ಷರೀಫ್ ತಮ್ಮ ಪೂರ್ವಜರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ಗ್ರಾಮದಲ್ಲಿ ಈಗಲೂ ಇರುವ ಏಕೈಕ ಮುಸಲ್ಮಾನ ಮನೆ ಎಂದರೆ ಅದು ಷರೀಫ್ ಕುಟುಂಬದ್ದು.

Share This Article
Leave a Comment

Leave a Reply

Your email address will not be published. Required fields are marked *