– ಕೊಲ್ಲೂರು ಮೂಕಾಂಬಿಕೆಗೆ ಸಲಾಂ ಮಂಗಳಾರತಿ
ಉಡುಪಿ: ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ರಚನೆಯಾದ ಕೂಡಲೇ ಟಿಪ್ಪು ಜಯಂತಿ ರದ್ದಾಯ್ತು. ಇದೀಗ ಪಠ್ಯದಿಂದಲೂ ಟಿಪ್ಪುವಿನ ಪಾಠವನ್ನು ಕಿತ್ತು ಹಾಕುವ ಚಿಂತನೆಯನ್ನು ಸರ್ಕಾರ ಮಾಡಿದೆ. ಕಮಲಪಾಳಯ ಟಿಪ್ಪುವನ್ನು ಇಷ್ಟೊಂದು ವಿರೋಧಿಸಿದರೂ ಬಿಜೆಪಿಯ ಭದ್ರಕೋಟೆ ಉಡುಪಿಯಲ್ಲಿ ಮಾತ್ರ ಟಿಪ್ಪು ಸುಲ್ತಾನನನ್ನು ದೇವರಂತೆ ಕಾಣಲಾಗುತ್ತಿದೆ.
Advertisement
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ದೊರೆ. ಫ್ರೆಂಚರ ಸಹಕಾರ ಪಡೆದು ಆಂಗ್ಲರನ್ನು ಹೊಡೆದೋಡಿಸಲು ಯತ್ನಿಸಿದ್ದನು. ಧರ್ಮಸಹಿಷ್ಣು ಎಂಬುದನ್ನು ಇತಿಹಾಸದ ಪಠ್ಯದಲ್ಲಿ ಓದಿಕೊಂಡಿದ್ದೆವು. ಆದರೆ ಅದೇ ಟಿಪ್ಪುವನ್ನು ಈಗ ಮತಾಂಧ, ಹಿಂದೂ, ಕ್ರೈಸ್ತರ ಮಾರಣಹೋಮ ಮಾಡಿದ ರಾಕ್ಷಸ, ಪರ್ಷಿಯನ್ ಭಾಷೆ ಹೇರಲು ನೋಡಿದ. ದೇಶದ ಮೇಲೆ ದಾಳಿ ಮಾಡಲು ಖಲೀಫರಿಗೆ ಆಹ್ವಾನ ನೀಡಿದ್ದ ಎಂದು ಬಲಪಂಥೀಯರು ಆರೋಪಿಸುತ್ತಿದ್ದಾರೆ. ಬಿಎಸ್‍ವೈ ಸರ್ಕಾರ ಟಿಪ್ಪುವನ್ನು ಪಠ್ಯದಿಂದಲೇ ತೆಗೆಯಲು ಮುಂದಾಗಿದೆ. ಈ ಬಗ್ಗೆ ಪರವಿರೋಧ ಚರ್ಚೆಗಳು ಜೋರಾಗಿವೆ. ಆದರೆ ಬಿಜೆಪಿಯ ಭದ್ರಕೋಟೆ ಉಡುಪಿಯಲ್ಲಿ ಟಿಪ್ಪುವನ್ನು ಹಿಂದೂ ದೇವಸ್ಥಾನಗಳಲ್ಲಿ ಇಂದಿಗೂ ನೆನಪು ಮಾಡಿಕೊಳ್ಳಲಾಗುತ್ತಿದೆ.
Advertisement
Advertisement
ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನನಿಗೆ ಇಂದಿಗೂ ಗೌರವ ಸಲ್ಲಿಸುತ್ತಿದ್ದಾರೆ. ದೇವಿ ಮೂಕಾಂಬಿಕೆಗೆ ಮಂಗಳಾರತಿ ಮಾಡುವಾಗ ಸಲಾಂ ಮಂಗಳಾರತಿ ಮಾಡಲಾಗುತ್ತಿದೆ. ಟಿಪ್ಪು, ಕೊಲ್ಲೂರು ದೇವಳಕ್ಕೆ ತೊಂದರೆ ಕೊಟ್ಟಿರಲಿಲ್ಲ. ಹೀಗಾಗಿ ಈ ಆರತಿ ಮಾಡಲಾಗುತ್ತಿದೆ.
Advertisement
ಕುಂದಾಪುರದ ಶಂಕರನಾರಾಯಣ ದೇವಸ್ಥಾನದ ಮೇಲೆ 350 ವರ್ಷದ ಹಿಂದೆ ಟಿಪ್ಪು ದಂಡೆತ್ತಿ ಬಂದಿದ್ದ. ಆದರೆ ಶಿವ ಮತ್ತು ವಿಷ್ಣುವನ್ನು ಒಂದೇ ಕಡೆ ಆರಾಧಿಸುತ್ತಿರೋದರನ್ನು ಕಂಡು ಮಾರು ಹೋಗಿದ್ದ. ದಾಳಿ ನಡೆಸಲು ಬಂದವನು ದೊಡ್ಡ ಗಂಟೆಯನ್ನು ದಾನವಾಗಿ ನೀಡಿದ್ದ. ಹೆಬ್ಬಾಗಿಲಿನಲ್ಲಿ ಟಿಪ್ಪು ಗಂಟೆ ಇಂದಿಗೂ ಇದೆ. ದಿನಕ್ಕೆರಡು ಬಾರಿ ಅದನ್ನು ಬಾರಿಸಲಾಗುತ್ತದೆ.
ಟಿಪ್ಪು ಸುಲ್ತಾನ ಕರಾವಳಿ ಕರ್ನಾಟಕದ ದಂಡಯಾತ್ರೆ ವೇಳೆ ಕೋಟಿ ಲಿಂಗೇಶ್ವರ ದೇಗುಲಕ್ಕೆ ಹೋಗಿದ್ದ. ಆದರೆ ಟಿಪ್ಪು ಈ ದೇವಸ್ಥಾನವನ್ನು ವಶಪಡಿಸಿಕೊಳ್ಳದೆ ಬಿಟ್ಟು ಬಿಟ್ಟಿದ್ದ. ಹೀಗಾಗಿ ದೇವಸ್ಥಾನದ ವಾರ್ಷಿಕ ಜಾತ್ರೆ, ರಥೋತ್ಸವ, ಮತ್ತು ದೈನಂದಿನ ಪೂಜೆ ಸಂದರ್ಭದಲ್ಲಿ ಟಿಪ್ಪು ಭೇಟಿಯ ನೆನಪಿಗಾಗಿ ಆರತಿ ಎತ್ತಲಾಗುತ್ತದೆ. ಅದೇನೇ ಇರಲಿ ಟಿಪ್ಪುವನ್ನು ವಿರೋಧಿಸುವ ಬಿಜೆಪಿ ಬಾಹುಳ್ಯದ ಈ ಪ್ರದೇಶದಲ್ಲಿ ಸಂಪ್ರದಾಯ, ನಂಬಿಕೆಗಳನ್ನು ಉಳಿಸಿ ಗೌರವಿಸಿಕೊಂಡು ಹೋಗ್ತಿರೋದು ವಿಶೇಷವೇ ಸರಿ.