ದಾವಣಗೆರೆ: ದೇವರಕೋಣ (Buffalo) ತಮಗೆ ಸೇರಿದ್ದು ಎಂದು ಹೇಳಿಕೊಂಡು ಆರಂಭಗೊಂಡ ಎರಡು ಗ್ರಾಮಸ್ಥರ ನಡುವಿನ ಫೈಟ್ ಡಿಎನ್‍ಎ ಟೆಸ್ಟ್ ಹಂತಕ್ಕೆ ಬಂದು ತಲುಪಿದೆ.
ದೇವರಕೋಣವನ್ನು ದಾವಣಗೆರೆ (Davanagere) ಜಿಲ್ಲೆಯ ಕುಣಿಬೆಳಕೆರೆ ಹಾಗೂ ಕುಳಗಟ್ಟೆ ಗ್ರಾಮದ ಜನರು ತಮಗೆ ಸೇರಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಸಂಬಂಧ ದಾವಣಗೆರೆ ಎಸ್ಪಿ ನೇತೃತ್ವದಲ್ಲಿ ಶನಿವಾರ ಎರಡು ಗ್ರಾಮಸ್ಥರ ಪಂಚಾಯ್ತಿ ನಡೆದಿದೆ. ಈ ವೇಳೆ ಕುಣಿಬೆಳಕೆರೆ ಗ್ರಾಮಸ್ಥರು, ದೇವರಬೆಳಕೆರೆಗೆ ಕೋಣ ಹೋಗಿದೆ ಅಲ್ಲಿಂದ ಅದನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ವಾದಿಸಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಕೋಣವನ್ನು ನಾವು ಬಿಟ್ಟುಕೊಡುವುದಿಲ್ಲವೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಕೋಣ ಯಾವ ಗ್ರಾಮಕ್ಕೆ ಸೇರಿದ್ದು ಎಂಬ ಬಗ್ಗೆ ಡಿಎನ್‍ಎ ಟೆಸ್ಟ್ ಆಗಲಿ ಎಂದು ಕುಳಗಟ್ಟಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಕೋಣನ ಮರಿಗಳು ನಮ್ಮ ಬಳಿ ಇವೆ ಅವುಗಳ ಡಿಎನ್‍ಎ ಪರೀಕ್ಷಿಸಿದರೆ ಕೋಣ ಯಾರಿಗೆ ಸೇರಿದ್ದು ಎಂಬುದು ತಿಳಿಯಲಿದೆ ಎಂದು ಗ್ರಾಮಸ್ಥರು ಮಲೇಬೆನ್ನೂರು (Malebennu) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನೂ ಶಿವಮೊಗ್ಗ (Shivamogga) ಪಶುವೈದ್ಯಾಧಿಕಾರಿಗಳು ಕೋಣವನ್ನು ಪರೀಕ್ಷಿಸಿ ಅದು ಆರು ವರ್ಷ ವಯಸ್ಸಿನ ಕೋಣ ಎಂದು ವರದಿ ನೀಡಿದ್ದಾರೆ. ವಿವಾದದ ಹಿನ್ನೆಲೆ ಕೋಣವನ್ನು ಶಿವಮೊಗ್ಗದ ಗೋಶಾಲೆಯಲ್ಲಿ ಇರಿಸಲಾಗಿದೆ.
ಮುಂದಿನ ವರ್ಷ ಗ್ರಾಮದಲ್ಲಿ ಕರಿಯಮ್ಮನ ಜಾತ್ರೆ ನಡೆಯಲಿದ್ದು ಅದಕ್ಕಾಗಿ ದೇವರ ಕೋಣ ಬೇಕಾಗಿದೆ. ಈಗಾಗಲೇ ಎರಡೂ ಗ್ರಾಮಸ್ಥರನ್ನು ಸೇರಿಸಿ ನಡೆಸಿದ ಸಭೆಗಳು ವಿಫಲವಾಗಿವೆ. ಎರಡೂ ಹಳ್ಳಿಗಳ ಗ್ರಾಮಸ್ಥರು ನಮ್ಮದೇ ಕೋಣವೆಂದು ಪಟ್ಟು ಹಿಡಿದಿರುವ ಹಿನ್ನೆಲೆ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಮಾರ್ಪಟ್ಟಿದೆ.