ತುಮಕೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವೆ ಉಮಾಶ್ರೀ ಹೆಸರು ಹೇಳಿಕೊಂಡು ಮಹಿಳೆಯೊಬ್ಬಳು ನೂರಾರು ಜನರಿಗೆ ವಂಚಿಸಿದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.
ಶಿರಾ ಗೇಟ್ ನ ನಿವಾಸಿ ಪುಷ್ಪಾ ಜನರಿಗೆ ಪಂಗನಾಮ ಹಾಕಿದ ವಂಚಕಿ. ಈಕೆ ಸರ್ಕಾರದ ವತಿಯಿಂದ ಎಸ್.ಬಿ.ಐ ನಲ್ಲಿ ಎರಡು ಲಕ್ಷದವರೆಗೂ ಲೋನ್ ಕೊಡಿಸುತ್ತೀನಿ ಎಂದು ಹೇಳಿ ದೊಡ್ಡಸಾರಂಗಿಪಾಳ್ಯ ಸೇರಿದಂತೆ ಹಲವು ಗ್ರಾಮಗಳ ನೂರಾರು ಜನರಿಂದ ಮುಂಗಡವಾಗಿ ಮನಸೋ ಇಚ್ಛೆ ಹಣ ವಸೂಲಿ ಮಾಡಿ ಮೋಸ ಮಾಡಿದ್ದಾಳೆ.
ಸ್ವಯಂ ಉದ್ಯೋಗ ಮಾಡಲು ಸರ್ಕಾರವೇ ಲೋನ್ ನೀಡುತ್ತೆ. ಅದಕ್ಕೆ ಮುಂಗಡವಾಗಿ ಹಣ ಕಟ್ಟಬೇಕು ಎಂದು ಹೇಳಿ ಕೆಲವರಿಂದ ನಾಲ್ಕು ಸಾವಿರ, ಇನ್ನೂ ಕೆಲವರಿಂದ ಐದು ಸಾವಿರ ಹೀಗೆ ಮನಬಂದಂತೆ ಲಕ್ಷಾಂತರ ರೂ. ಹಣ ಪೀಕಿದ್ದಾಳೆ. ಸುಳ್ಳು ದಾಖಲೆ ಪತ್ರ ತೋರಿಸಿ ವಂಚಿಸಿದ್ದಾಳೆ.
ಒಂದು ವರ್ಷ ಆದರೂ ಲೋನ್ ಸಿಗದಿದ್ದಾಗ ರೊಚ್ಚಿಗೆದ್ದ ಜನರು ಶಿರಾ ಗೇಟ್ ನಲ್ಲಿ ಇರುವ ಪುಷ್ಪಾಳ ಮನೆಗೆ ಹೋಗಿ ತರಾಟೆ ತೆಗೆದುಕೊಂಡಿದ್ದಾರೆ. ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಪುಷ್ಪಾ ಒಪ್ಪದಿದ್ದಾಗ ನಗರ ಠಾಣೆವರೆಗೆ ಸುಮಾರು 2 ಕಿ.ಮಿ.ನಷ್ಟು ದೂರ ಮೆರವಣಿಗೆ ಮಾಡಿಕೊಂಡು ಬಂದಿದ್ದಾರೆ. ಈ ನಡುವೆ ಮೆರವಣಿಗೆ ಉದ್ದಕ್ಕೂ ಧರ್ಮದೇಟು ನೀಡುತ್ತಾ ಬಂದಿದ್ದಾರೆ.
ಪುಷ್ಪಾಳ ವಂಚನೆಗೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.