– ಇದುವರೆಗೆ 50 ಸಾವಿರಕ್ಕೂ ಹೆಚ್ಚು ಜನ ಗುಳೆ
– ಉದ್ಯೋಗ ಖಾತ್ರಿ ಹೆಸ್ರಿಗೆ ಮಾತ್ರ, ಕೂಲಿ ಕೆಲಸವೇ ಇಲ್ಲ
– ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಿಂದಲೇ ಗುಳೆ
ರಾಯಚೂರು: ಭೀಕರ ಬರಗಾಲದಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಶನಿವಾರ, ಭಾನುವಾರ ಬಂದರೆ ಸಾಕು ಒಂದಿಲ್ಲೊಂದು ಗ್ರಾಮ ಖಾಲಿಯಾಗುತ್ತಿದೆ. ಮಹಾನಗರಗಳತ್ತ ಜೀವನ ನಡೆಸಲು ಕೆಲಸ ಅರಸಿ ಹಳ್ಳಿ ಜನರು ಗುಳೆ ಹೋಗುತ್ತಿದ್ದಾರೆ.
Advertisement
ಸಿಂಧನೂರು ಬಸ್ ನಿಲ್ದಾಣದಿಂದ ಶನಿವಾರ ತಡರಾತ್ರಿ ಹತ್ತಾರು ಹಳ್ಳಿಗಳ ನೂರಾರು ಜನ ದುಡಿಯಲು ಬೆಂಗಳೂರಿಗೆ ಗುಳೆ ಹೋಗಿದ್ದಾರೆ. ತಡರಾತ್ರಿ ಗಂಟು- ಮೂಟೆ ಕಟ್ಟಿಕೊಂಡು ಮಕ್ಕಳೊಂದಿಗೆ ಬಂದ ಜನ, ಬಸ್ ಇಲ್ಲದೆ ಪರದಾಡಿದರು. ನಂತರ ಹೆಚ್ಚುವರಿ ಬಸ್‍ಗಳ ವ್ಯವಸ್ಥೆ ಮಾಡಿ ಜನರನ್ನ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಮಳೆ ಬೆಳೆ ಇಲ್ಲದೆ, ಕೂಲಿ ಕೆಲಸವೂ ಸಿಗದೆ ಜನ ತಮ್ಮ ಗ್ರಾಮಗಳನ್ನು ಬಿಡುತ್ತಿದ್ದಾರೆ.
Advertisement
Advertisement
ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡರ ಸ್ವಕ್ಷೇತ್ರ ಸಿಂಧನೂರು ನೀರಾವರಿ ಪ್ರದೇಶವಾದರು ಬರ ನಿರ್ವಹಣೆ ಸಾಧ್ಯವಾಗಿಲ್ಲ. ಇತ್ತೀಚೆಗಷ್ಟೆ ಮಾನವಿ ತಾಲೂಕಿನ ಜನರು ತಂಡೋಪತಂಡವಾಗಿ ಗುಳೆ ಹೋಗಿದ್ದರು. ಆಗ ಕೂಡ ಗುಳೆ ಹೋಗುವವರಿಗಾಗಿಯೇ ಹೆಚ್ಚುವರಿಯಾಗಿ ನಾಲ್ಕು ಬಸ್‍ಗಳನ್ನ ಬಿಡಲಾಗಿತ್ತು.
Advertisement
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 2019-20 ನೇ ಸಾಲಿನಲ್ಲಿ ಕೇವಲ ಶೇಕಡಾ 12.08 ರಷ್ಟು ಜನರಿಗೆ ಮಾತ್ರ ಕೂಲಿ ಕೆಲಸ ನೀಡಲಾಗಿದೆ. 85 ಲಕ್ಷ ಮಾನವ ದಿನಗಳನ್ನ ಸೃಜನೆ ಮಾಡಬೇಕಾದಲ್ಲಿ ಕೇವಲ 10 ಲಕ್ಷ 27 ಸಾವಿರ ದಿನಗಳನ್ನ ಮಾತ್ರ ಸೃಜನೆ ಮಾಡಲಾಗಿದ್ದು, 23 ಕೋಟಿ 79 ಲಕ್ಷ ಅನುದಾನ ಬಳಕೆ ಮಾಡಲಾಗಿದೆ. ಕಳೆದ ವರ್ಷ ಶೇಕಡಾ 114.59 ರಷ್ಟು ಸಾಧನೆ ಮಾಡಿ, 268 ಕೋಟಿ 65 ಲಕ್ಷ ರೂ. ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿತ್ತು. ಹೀಗಾಗಿ ಕಳೆದ ವರ್ಷ ಗುಳೆ ಹೋಗುವವರ ಸಂಖ್ಯೆ ಸ್ವಲ್ಪ ಕಡಿಮೆಯಿತ್ತು. ಆದರೆ ಈ ಬಾರಿ ಭೀಕರ ಬರಗಾಲ ಎದುರಾಗಿರುವುದರಿಂದ ಜನ ಜಾನುವಾರುಗಳು ತತ್ತರಿಸಿ ಹೋಗಿವೆ. ಜಾನುವಾರುಗಳನ್ನ ಮಾರಾಟ ಮಾಡಿ ಜನ ಗುಳೆ ಹೋಗುತ್ತಿದ್ದಾರೆ.