ಮಂಡ್ಯ: ಬೀದಿ ನಾಯಿಗಳ ಹಾವಳಿಯಿಂದ ಕೆಂಗೆಟ್ಟಿದ್ದ ಸಕ್ಕರೆ ನಾಡಿನ ಮಂದಿ ಹೊಸ ಉಪಾಯವೊಂದನ್ನು ಕಂಡು ಹಿಡಿದು ಸದ್ಯ ನಾಯಿಗಳ ಕಾಟದಿಂದ ಕೊಂಚ ಮುಕ್ತಿ ಪಡೆದಿದ್ದಾರೆ.
ಹೌದು. ಮಂಡ್ಯ ನಗರದ ಕ್ರಿಶ್ಚಿಯನ್ ಕಾಲೋನಿ ಹಾಗೂ ಸುಭಾಷ್ ನಗರದ ಮಂದಿ ಬೀದಿ ನಾಯಿಗಳ ಹಾವಳಿಯಿಂದ ಪಾರಾಗಲು ನೀಲಿ ನೀರು ತುಂಬಿದ ಬಾಟಲಿಯ ಮೊರೆಹೋಗಿದ್ದಾರೆ. ಈ ಬೀದಿಗಳಲ್ಲಿ ಕಳೆದ ಒಂದು ತಿಂಗಳಿಂದ ನೂರಾರು ಬೀದಿ ನಾಯಿಗಳು ಇದ್ದವು. ಇವುಗಳ ಹಾವಳಿಯಿಂದ ಇಲ್ಲಿನ ನಿವಾಸಿಗಳು ಕೆಂಗೆಟ್ಟು ಹೋಗಿದ್ದರು. ನಾಯಿಗಳ ಕಾಟದಿಂದ ಜನರು ಬೀದಿಯಲ್ಲಿ ಓಡಾಡಲು ಹೆದರುತ್ತಿದ್ದರು. ಮನೆಯ ಮುಂದೆ ಬೀದಿ ನಾಯಿಗಳು ಗಲೀಜು ಮಾಡಿ ಮನೆಯವರನ್ನು ಕೆಂಗೆಂಡಿಸಿದ್ದವು.
Advertisement
Advertisement
ಅಷ್ಟೇ ಅಲ್ಲದೇ ಇವುಗಳ ಹಾವಳಿ ಬಗ್ಗೆ ಸ್ಥಳೀಯರು ನಗರಸಭೆಗೆ ದೂರು ಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಸ್ಥಳೀಯ ಮಹಿಳೆಯೊಬ್ಬರು ಖಾಲಿ ನೀರಿನ ಬಾಟಲಿಗೆ ನೀಲಿ ಬಣ್ಣದ ನೀರು ಮತ್ತು ಅದಕ್ಕೆ ಸ್ವಲ್ಪ ಸೀಮೆಎಣ್ಣೆ ಸೇರಿಸಿ ತನ್ನ ಮನೆ ಕಾಂಪೌಡ್ ಮೇಲೆ ಇಟ್ಟು ಹೊಸ ತಂತ್ರಗಾರಿಕೆ ಮಾಡಿದ್ದರು. ಇದರಿಂದ ಆ ಮನೆಯ ಮುಂದೆ ನಾಯಿಗಳು ಬರುತ್ತಿಲ್ಲ. ಬಾಟಲಿಯಲ್ಲಿದ್ದ ನೀಲಿ ನೀರನ್ನು ನೋಡಿ ನಾಯಿಗಳು ದೂರ ಹೋಗ್ತಿವೆ. ಈಗ ನಾಯಿಗಳ ಕಾಟ ಕಡಿಮೆಯಾಗಿದ ಎಂದು ಮಹಿಳೆ ಅಕ್ಕಪಕ್ಕದ ಮನೆಯವರ ಬಳಿ ಹೇಳಿದರು.
Advertisement
Advertisement
ಆ ನಂತರ ಈ ನೀಲಿ ಬಾಟಲಿಯ ಸುದ್ದಿ ಇಡೀ ಬಡಾವಣೆಗೆ ಸೇರಿದಂತೆ ಬೇರೆ ಬೀದಿಯವರಿಗೆ ಬಾಯಿಂದ ಬಾಯಿಗೆ ಹರಡಿ ದೊಡ್ಡ ಸುದ್ದಿಯಾಗಿಬಿಟ್ಟಿದೆ. ಇದೀಗ ನಾಯಿಗಳ ಕಾಟಕ್ಕೆ ಬೇಸತ್ತಿದ್ದ ಎರಡೂ ಬೀದಿಯಲ್ಲಿ ಬಹುತೇಕ ಮನೆಗಳ ಕಾಂಪೌಂಡ್ ಮೇಲೆ, ಗೇಟ್‍ಗಳಲ್ಲಿ ಹಾಗೂ ಮರಗಳಲ್ಲಿ ನೀಲಿ ಬಣ್ಣದ ನೀರು ತುಂಬಿದ ಬಾಟಲಿಗಳೇ ಕಾಣ್ತಿದ್ದು, ನೋಡಿಗರಲ್ಲಿ ಅಚ್ಚರಿ ಮೂಡಿಸುತ್ತಿದೆ. ಅಚ್ಚರಿ ವಿಷಯ ಅಂದರೆ ಈ ಬಡಾವಣೆಯಲ್ಲಿರೋ ಪ್ರತಿಯೊಬ್ಬರು ಕೂಡ ಅಕ್ಷರಸ್ಥರೇ ಆದರೂ ಇವರೆಲ್ಲರೂ ಕೂಡ ಇದೀಗ ಈ ಹೊಸ ಪ್ರಯೋಗವನ್ನು ಅನುಸರಿಸುತ್ತಿದ್ದಾರೆ. ಪೊಲೀಸ್, ವಕೀಲರು ಸೇರಿದಂತೆ ಸರ್ಕಾರಿ ಅಧಿಕಾರಿಗಳ ಮನೆಯ ಮುಂದೆ ಕೂಡ ಈ ನೀಲಿ ಬಣ್ಣದ ನೀರು ತುಂಬಿರೋ ಬಾಟಲಿಗಳೇ ರಾರಾಜಿಸುತ್ತಿವೆ.
ಬೀದಿ ನಾಯಿಗಳ ಹಾವಳಿಯಿಂದ ನಗರದಲ್ಲಿ ನಡೆಯುತ್ತಿರೋ ಈ ಹೊಸ ಪ್ರಯೋಗ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಪ್ರತಿಯೊಬ್ಬರ ಮನೆಯ ಮುಂದೆ ಇದೀಗ ನೀಲಿ ನೀರಿನ ಬಾಟಲಿಗಳು ಕಾಣ್ತಿದೆ. ಆದರೆ ಈ ಹೊಸ ಪ್ರಯೋಗದ ಬಗ್ಗೆ ಪಶು ವೈದ್ಯರು ಅಚ್ಚರಿ ವ್ಯಕ್ತಪಡಿಸಿ, ಇದೊಂದು ಮೂಡನಂಬಿಕೆ. ಈ ಪ್ರಯೋಗದ ಬಗ್ಗೆ ನಾನು ಎಲ್ಲೂ ಓದಿಲ್ಲ, ಕೇಳಿಲ್ಲ. ಇದರಿಂದ ನಾಯಿಗಳು ಹೆದರಿ ದೂರ ಹೋಗ್ತವೆ ಅನ್ನೋದು ಸುಳ್ಳು. ನಾಯಿಗಳಿಗೆ ಆ ತರಹದ ಯಾವುದೇ ಬಣ್ಣ ಗುರ್ತಿಸುವಿಕೆ ಗುಣ ಇಲ್ಲ. ಆದರೂ ಜನರು ಹೇಳ್ತಿರೋ ಈ ಮಾತು ನನಗೂ ಅಚ್ಚರಿ ಮೂಡಿಸಿದೆ. ನೀಲಿ ನೀರು ತುಂಬಿದ ಬಾಟಲಿ ಕಟ್ಟಿದ ಮಾತ್ರಕ್ಕೆ ನಾಯಿಗಳು ದೂರ ಹೋಗಲ್ಲ ಎನ್ನುವುದು ಪಶು ವೈದ್ಯರ ಮಾತಾಗಿದೆ.
ಅದೇನೆ ಇರಲಿ ಮಂಡ್ಯ ನಗರದಲ್ಲಿ ನಾಯಿ ಹಾವಳಿಂದ ಮುಕ್ತಿ ಹೊಂದಲು ಅಲ್ಲಿನ ಜನರು ಕಂಡುಕೊಂಡಿರುವ ಈ ಉಪಾಯ ನಾಯಿಗಳನ್ನು ಈ ಬೀದಿಯಲ್ಲಿ ಕಾಣದಂತೆ ಮಾಡಿದೆ. ಈ ಹೊಸ ಪ್ರಯೋಗದಿಂದ ಜನರು ನಾಯಿಗಳ ಹಾವಳಿ ಇಲ್ಲದೇ ನೆಮ್ಮದಿಯಾಗಿದ್ದಾರೆ. ಆದರೆ ನೀಲಿ ಬಾಟಲಿ ನೋಡಿದ ನಾಯಿಗಳು ಅಲ್ಲಿಂದ ಓಡಿ ಹೋಗ್ತಿರೋದ್ಯಾಕೆ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.