ಬೆಂಗಳೂರು: ಒಂದು ಕಡೆ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಇತ್ತ ಜನರು ಉಚಿತ ಹಾಲಿಗಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಸುಮಾರು 2 ಕಿಲೋ ಮೀಟರ್‌ವರೆಗೂ ಕ್ಯೂ ನಿಂತಿರುವುದನ್ನು ಬೆಂಗಳೂರಿನ ಲಗ್ಗರೆಯಲ್ಲಿ ಕಾಣಬಹುದಾಗಿದೆ.
ಸರ್ಕಾರದ ವತಿಯಿಂದ ಉಚಿತವಾಗಿ ಹಾಲು ವಿತರಣೆ ಮಾಡಲಾಗುತ್ತಿದೆ. ಆದರೆ ಉಚಿತ ಹಾಲಿಗಾಗಿ ಇಂದು ಮುಂಜಾನೆ 5 ಗಂಟೆಯಿಂದ ಸಾವಿರಾರು ಜನರು ಕಾತು ನಿಂತಿದ್ದಾರೆ. ಆದರೆ ಜನರು ಸಾಮಾಜಿಕ ಅಂತರವನ್ನು ಮರೆತು ಸಾಲುಗಟ್ಟಿ ನಿಂತಿದ್ದು, ಸುಮಾರು 2000 ಜನ ಹಾಲಿಗಾಗಿ ಕ್ಯೂ ನಿಂತಿದ್ದಾರೆ.
ತಕ್ಷಣ ಪೊಲೀಸ್ ಸ್ಥಳಕ್ಕೆ ಬಂದು ಅವರನ್ನು ಮನೆಗೆ ಕಳುಹಿಸುವ ಪ್ರಯತ್ನ ಮಾಡಿದ್ದಾರೆ. ಅರ್ಧ ಲೀಟರ್ ಹಾಲಿಗಾಗಿ ಕೊರೊನಾ ವೈರಸ್ ಮನೆಗೆ ಕರೆದುಕೊಂಡು ಹೋಗಬೇಡಿ. ಇಲ್ಲಿ ಉಚಿತವಾಗಿ ಹಾಲು ನೀಡುತ್ತಿಲ್ಲ. ಮೊದಲು ಮನೆಗಳಗೆ ಹೋಗಿ, ಯಾಕೆ ಹೀಗೆ ರೋಡಿಗೆ ಬರುತ್ತೀರ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮಾತು ಕೇಳದ ಜನರಿಗೆ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದಾರೆ.
ರಾಜಕಾರಣಿಗಳು ಉಚಿತವಾಗಿ ಹಾಲು ಕೊಡುತ್ತಾರೆ ಎಂದು ಜನ ಸೇರುತ್ತಾರೆ. ಜನರನ್ನು ಓಡಿಸುವುದಕ್ಕೆ ಪೊಲೀಸರು ಲಾಠಿ ಚಾರ್ಚ್ ಮಾಡುತ್ತಾರೆ. ಪ್ರಚಾರಕ್ಕಾಗಿ ರಾಜಕೀಯ ನಾಯಕರು ಉಚಿತ ಹಾಲು ನೀಡೋದಾಗಿ ಹೇಳಿಕೊಳ್ಳುತ್ತಾರೆ. ಅಗತ್ಯ ಇರುವವರು ಬಿಟ್ಟು ಉಚಿತವಾಗಿ ಎಂದ ಕೂಡಲೇ ಮನೆ ಮಂದಿಯೆಲ್ಲಾ ಬರುತ್ತಾರೆ. ಒಂದು ಮನೆಯಿಂದ ಒಬ್ಬರು ಬಂದು ಹಾಲು ಪಡೆದರೆ ಇಷ್ಟು ಜನ ಸೇರುತ್ತಿರಲಿಲ್ಲ. ಅತಿಯಾಸೆಗೆ ಮನೆಯವರೆಲ್ಲ ಬಂದು ಕ್ಯೂ ನಿಂತಿದ್ದಾರೆ. ಒಬ್ಬರಿಗೆ ಅರ್ಧ ಲೀಟರ್ ಹಾಲು ನೀಡುತ್ತಾರೆ ಎಂದು ಗಂಡ, ಹೆಂಡತಿ, ಮಕ್ಕಳು ಸಹ ಕ್ಯೂನಲ್ಲಿ ನಿಂತಿದ್ದಾರೆ. ಅಲ್ಲದೇ ಸಾಮಾಜಿಕ ಅಂತರವಿಲ್ಲ, ಮಾಸ್ಕ್ ಇಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.